ಮೂವರ ಕೊಲೆ: 18 ಸಿಂಹಗಳ ಬಂಧನ

ಮೂವರ ಕೊಲೆ: 18 ಸಿಂಹಗಳ ಬಂಧನ

Jun 15, 2016 03:47:54 PM (IST)

ಅಹಮ್ಮದಾಬಾದ್: ಅರಣ್ಯ ಪ್ರದೇಶದಲ್ಲಿ ಮೂವರು ವ್ಯಕ್ತಿಗಳ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ 18 ಗಂಡು ಸಿಂಹಗಳನ್ನು ಗುಜರಾತ್ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಇದೇನಪ್ಪಾ ಸಿಂಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅಚ್ಚರಿಯಾಗಬಹುದು. ಮೂವರು ವ್ಯಕ್ತಿಗಳನ್ನು ಕೊಂದ ಸಿಂಹ ಯಾವುದೆಂದು ಪತ್ತೆ ಹಚ್ಚಲು ಪೊಲೀಸರು 18 ಶಂಕಿತ ಸಿಂಹಗಳನ್ನು ವಶಕ್ಕೆ ತೆಗೆದುಕೊಂಡು ಅವುಗಳ ಹೆಜ್ಜೆ ಗುರುತುಗಳನ್ನು ಸಂಗ್ರಹಿಸುತ್ತಿದ್ದಾರೆ.

ಒಂದು ವೇಳೆ 18 ಸಿಂಹಗಳ ಪೈಕಿ ಮೂವರನ್ನು ಕೊಂದ ಸಿಂಹ ಪತ್ತೆಯಾದರೆ ಅದಕ್ಕೆ ಜೀವಾವವಧಿ ಶಿಕ್ಷೆ ನೀಡಲು ನಿರ್ಧರಿಸಲಾಗಿದೆ. ಜೀವಾವಧಿ ಶಿಕ್ಷೆ ಅಂದರೆ ಜೈಲಿನಲ್ಲಿ ಅಲ್ಲ, ತಪ್ಪಿತಸ್ಥ ಗಂಡು ಸಿಂಹ ಜೀವಮಾನವಿಡಿ ಝೂ(ಮೃಗಾಲಯ)ನಲ್ಲಿ ಕಾಲಕಳೆಯಬೇಕಾಗುತ್ತದೆ. ಉಳಿದ ಸಿಂಹಗಳನ್ನು ಕಾಡಿಗೆ ಬಿಡಲಾಗುತ್ತದೆ.

ಗುಜರಾತನ್‌ನ ಗೀರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 400ಕ್ಕೂ ಅಧಿಕ ಸಿಂಹಗಳಿದ್ದು, ಅವು ಮೇಲಿಂದ ಮೇಲೆ ಮಾನವರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಹೆಜ್ಜೆ ಗುರುತಿನ ವರದಿಗಾಗಿ ಕಾಯುತ್ತಿದ್ದೇವೆ. ಇನ್ನೂ 9 ಸಿಂಹಗಳ ಹೆಜ್ಜೆ ಗುರುತಿನ ವರದಿ ಬರಬೇಕಿದೆ ಎಂದು ಗುಜರಾತ್​ನ ಹಿರಿಯ ಅರಣ್ಯ ಅಧಿಕಾರಿ ಜೆ.ಎ.ಖಾನ್ ತಿಳಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.