ಭೀಕರ ಪ್ರವಾಹ: ಮಹಾರಾಷ್ಟ್ರ,ಕರ್ನಾಟಕ-ಕೇರಳದಲ್ಲಿ 179ಮಂದಿ ದುರ್ಮರಣ

ಭೀಕರ ಪ್ರವಾಹ: ಮಹಾರಾಷ್ಟ್ರ,ಕರ್ನಾಟಕ-ಕೇರಳದಲ್ಲಿ 179ಮಂದಿ ದುರ್ಮರಣ

YK   ¦    Aug 13, 2019 01:47:25 PM (IST)
ಭೀಕರ ಪ್ರವಾಹ: ಮಹಾರಾಷ್ಟ್ರ,ಕರ್ನಾಟಕ-ಕೇರಳದಲ್ಲಿ 179ಮಂದಿ ದುರ್ಮರಣ

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳಕ್ಕೆ ಅಪ್ಪಳಿಸಿದ ಪ್ರವಾಹದಲ್ಲಿ ಇದೀಗ ಮೃತರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದು, ಜನಜೀವನ ದುಸ್ತರವಾಗಿದೆ.

ಕೇರಳದಲ್ಲಿ 88, ಕರ್ನಾಟಕದಲ್ಲಿ 48 ಹಾಗೂ ಮಹಾರಾಷ್ಟ್ರದಲ್ಲಿ 43 ಮಂದಿ ಭೀಕರ ಪ್ರವಾಹಕ್ಕೆ ಬಲಿಯಾಗಿದ್ದಾರೆ.

ಕೇರಳದಲ್ಲಿ ಉಂಟಾದ ಪ್ರವಾಹಕ್ಕೆ ಜೀವಹಾನಿಯೊಂದಿಗೆ ಅಪಾರ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ.

ಎನ್ ಡಿಆರ್ ಎಫ್ ಹಾಗೂ ಪೊಲೀಸ್ ಅಧಿಕಾರಿ ರಕ್ಷಣೆಯಲ್ಲಿ ಕೈಜೋಡಿಸಿದ್ದು, ಅನೇಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಹವಾಮಾನ ಇಲಾಖೆ ಇನ್ನೂ ಕೆಲದಿನ ಕೇರಳದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗುವು ಸಾಧ್ಯತೆಯಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರವಾಹಕ್ಕೆ ಒಳಗಾದ ಜಿಲ್ಲೆಗಳಾದ ವಯಾನಾಡ್ ಹಾಗೂ ಮಲ್ಲಪುರಂಗೆ ಭೇಟಿ ವೈಮಾನಿಕ ಸಮೀಕ್ಷೆ ನಡೆಸಿದರು.

ಕರ್ನಾಟಕದಲ್ಲಿ ಭೀಕರ ಪ್ರವಾಹಕ್ಕೆ 48ಮಂದಿ ಸಾವನ್ನಪ್ಪಿದ್ದು, ಇನ್ನೂ 12ಮಂದಿ ನಾಪತ್ತೆಯಾಗಿದ್ದಾರೆ. ಇದುವರೆಗೆ 6.73 ಲಕ್ಷ ಮಂದಿ ಹಾಗೂ 50ಸಾವಿರ ಪ್ರಾಣಿಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗಾಗಿ ಒಟ್ಟು 1224 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು 3.93,956 ಮಂದಿಗೆ ನೆರವು ನೀಡಲಾಗಿದೆ. ರಾಜ್ಯದಲ್ಲಿ 86ತಾಲ್ಲೂಕುಗಳಲ್ಲಿ 17 ಜಿಲ್ಲೆಗಳು ಹಾಗೂ ಅಲ್ಲಿನ 2738 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿದೆ. ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹಕ್ಕೆ ಒಳಗಾದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಶೀಘ್ರವೇ 10.000ಕೋಟಿ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಮನವಿಯನ್ನು ಮಾಡಿದ್ದಾರೆ. ಪ್ರವಾಹಕ್ಕೆ ಒಳಗಾದ ಜಿಲ್ಲೆಗಳಿಗೆ ಗೃಹ ಸಚಿವ ಅಮಿತ್ ಶಾ ಹಾಗೂ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.