ಮತ್ತೊಂದು ಸರಣಿ ಗೆಲುವಿನತ್ತ ಕೊಹ್ಲಿ ಪಡೆಯ ದಾಪುಗಾಲು

ಮತ್ತೊಂದು ಸರಣಿ ಗೆಲುವಿನತ್ತ ಕೊಹ್ಲಿ ಪಡೆಯ ದಾಪುಗಾಲು

HSA   ¦    Dec 05, 2017 05:48:10 PM (IST)
ಮತ್ತೊಂದು ಸರಣಿ ಗೆಲುವಿನತ್ತ ಕೊಹ್ಲಿ ಪಡೆಯ ದಾಪುಗಾಲು

ನವದೆಹಲಿ: ದೆಹಲಿಯ ವಾತಾವರಣ ಕಲುಷಿತಗೊಂಡಿರುವ ಬಗ್ಗೆ ದೂರಿರುವ ಲಂಕಾ ಗೆಲುವಿಗೆ 410 ರನ್ ಗುರಿ ಪಡೆದುಕೊಂಡಿದ್ದು, ಮೂರನೇ ಹಾಗೂ ಅಂತಿಮ ಟೆಸ್ಟ್ ನ ನಾಲ್ಕನೇ ದಿನದ ಅಂತ್ಯದ ವೇಳೆಗೆ ಲಂಕಾ 31 ರನ್ ಗಳಿಗೆ ಮೂರು ವಿಕೆಟ್ ಕಳಕೊಂಡಿದೆ.

ನಾಲ್ಕನೇ ದಿನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿ 16 ಓವರ್ ಗಳ ಆಟವಾಡಿದ ಲಂಕಾ ಆಟಗಾರರು ಗೆಲುವಿಗೆ ಪ್ರಯತ್ನಿಸುವ ಬದಲು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಸದೀರಾ ಸಮರವಿಕ್ರಮ(5) ವಿಕೆಟ್ ನ್ನು ಮೊಹಮ್ಮದ್ ಶಮಿ ಉರುಳಿಸಿದರು. ಇದರ ಬಳಿಕ ರವೀಂದ್ರ ಜಡೇಜಾ ಎರಡು ವಿಕೆಟ್ ಕಬಳಿಸಿದ ಲಂಕಾಕ್ಕೆ ಆಘಾತ ನೀಡಿದರು. ಭಾರತ ಮತ್ತೊಂದು ಬೃಹತ್ ಗೆಲುವಿನತ್ತ ಮುನ್ನಡೆಯುತ್ತಿರುವುದು ಸ್ಪಷ್ಟವಾಗಿದೆ. ಈ ಸರಣಿ ಗೆದ್ದರೆ ಸತತ 9 ಸರಣಿ ಗೆಲುವು ಪಡೆದ ಸಾಧನೆ ಭಾರತದ್ದಾಗಲಿದೆ.

ಇದಕ್ಕೂ ಮೊದಲು ಕಪ್ತಾನ ವಿರಾಟ್ ಕೊಹ್ಲಿ 50, ರೋಹಿತ್ ಶರ್ಮಾ 50, ಶಿಖರ್ ಧವನ್ 67 ರನ್ ಮಾಡಿ ಭಾರತ ಐದು ವಿಕೆಟ್ ನಷ್ಟಕ್ಕೆ 246 ರನ್ ಮಾಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಲಂಕಾಗೆ 410 ರನ್ ಗಳ ಗೆಲುವಿನ ಗುರಿಯನ್ನಿಟ್ಟಿತು.

ಮೊದಲ ಇನ್ನಿಂಗ್ಸ್ ನಲ್ಲಿ 163 ರನ್ ಗಳ ಮುನ್ನಡೆಯಲ್ಲಿದ್ದ ಭಾರತದ ಆಟಗಾರರು ವೇಗವಾಗಿ ರನ್ ಗಳಿಸುವ ಪ್ರಯತ್ನ ಮಾಡಿದರು. ಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ ಕಪ್ತಾನ ದಿನೇಶ್ ಚಂದಿಮಾಲ್ 164 ರನ್ ನೆರವಿನಿಂದ 373 ರನ್ ಪೇರಿಸಿತು.