ಮತ್ತೊಮ್ಮೆ ರೋಚಕ ಜಯ ದಾಖಲಿಸಿದ ಪಂಜಾಬ್

ಮತ್ತೊಮ್ಮೆ ರೋಚಕ ಜಯ ದಾಖಲಿಸಿದ ಪಂಜಾಬ್

SRJ   ¦    Apr 24, 2018 12:11:47 PM (IST)
ಮತ್ತೊಮ್ಮೆ ರೋಚಕ ಜಯ ದಾಖಲಿಸಿದ ಪಂಜಾಬ್

ಹೊಸದಿಲ್ಲಿ: ಐಪಿಎಲ್ ಟಿ-20 ಟೂರ್ನಿಯ 11 ಆವೃತ್ತಿಯ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 4 ರನ್ ಗಳ ರೋಚಕ ಜಯ ದಾಖಲಿಸಿದೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗಾಗಿ 144 ರನ್ ಗುರಿಯ ಬೆನ್ನುಹತ್ತಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 139 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ಟಾಸ್ ಗೆದ್ದ ಡೆಲ್ಲಿ ಡೇರ್ ಡೆವಿಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೇಯಸ್ ಅಯ್ಯರ್ 45 ಎಸೆತಕ್ಕೆ, 5 ಬೌಂಡರಿ 1 ಸಿಕ್ಸರ್ ಬಾರಿಸಿ 57 ರನ್ ಗಳಿಸಿದರು. ಆದರೂ ಅವರೆಷ್ಟೇ ಹೋರಾಟ ಮಾಡಿದರೂ ತಂಡವನ್ನು ಗೆಲ್ಲಿಸುವಲ್ಲಿ ಸಾಧ್ಯವಾಗಲಿಲ್ಲ.

ಇತ್ತ ಪಂಜಾಬ್ ತಂಡ ಕ್ರಿಸ್ ಗೇಲ್ ಅವರಿಗೆ ವಿಶ್ರಾಂತಿ ನೀಡಿ, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಫಿಂಚ್ ಅವರನ್ನು ಕಣಕ್ಕಿಳಿಸಿದ್ದರು. ಆದರೆ 5ನೇ ಓವರ್ ನಲ್ಲಿ ಫ್ಲಂಕೆಟ್ ಅವರಿಗೆ ರಾಹುಲ್ ಸೋತು ತಲೆ ಬಾಗಿದರು.

ಯುವರಾಜ್ ಸಿಂಗ್ ಕೇವಲ 14 ರನ್ ಗಳಿಸಿ ಪೆವಿಲಿಯನ್ ನತ್ತ ಸಾಗಿದರು. ಅಂತಿಮ ಓವರ್‌ಗಳಲ್ಲಿ ನಾಯಕ ರವಿಚಂದ್ರನ್ ಅಶ್ವಿನ್ ಮತ್ತು ಆ್ಯಂಡ್ರ್ಯೂ ಟೈ ಅವರು ಪ್ರೇಕ್ಷಕರಿಗೆ ನಿರಾಸೆ ಮಾಡಿದರು.

ಪಂಜಾಬ್‌ ಪರ ಕರುನ್ ನಾಯರ್ 34 , ಕೆ.ಎಲ್. ರಾಹುಲ್ 23, ಮಯಾಂಕ್ ಅಗರ್ವಾಲ್ 26 ಹಾಗೂ ಮಿಲ್ಲರ್ ವೇಗದ 26 ರನ್ ಗಳಿಸಿದರು. ಡೆಲ್ಲಿ ಪರ ಪ್ಲಂಕೆಟ್ 3 ವಿಕೆಟ್, ಬೋಲ್ಟ್ ಹಾಗೂ ಅವೆಶ್ ತಲಾ 2 ವಿಕೆಟ್ ಪಡೆದರು.

ಒಟ್ಟು 20 ಓವರ್ ಗಳಲ್ಲಿ 8ಕ್ಕೆ 143 ಗಳಿಸಿದ ಕಿಂಗ್ ಇಲೆವನ್ ಪಂಜಾಬ್ ಜಯ ದಾಖಲಿಸಿತು. 20 ಓವರ್ ಗಳಲ್ಲಿ 8 ವಿಕೆಟ್ ಗೆ 139 ರನ್ ಗಳಿಸಿದ ಡೆಲ್ಲಿ ಡೇರ್ ಡೆವಿಲ್ಸ್ ಪಂಜಾಬ್ ಗೆ ತಲೆ ಬಾಗಿತು.