ಶತಕ ಬಾರಿಸಿದ ವಾಟ್ಸನ್: ಗೆಲುವಿನ ನಗೆ ಬೀರಿದ ಚೆನ್ನೈ

ಶತಕ ಬಾರಿಸಿದ ವಾಟ್ಸನ್: ಗೆಲುವಿನ ನಗೆ ಬೀರಿದ ಚೆನ್ನೈ

SRJ   ¦    Apr 21, 2018 12:06:59 PM (IST)
ಶತಕ ಬಾರಿಸಿದ ವಾಟ್ಸನ್: ಗೆಲುವಿನ ನಗೆ ಬೀರಿದ ಚೆನ್ನೈ

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ನ ಆರಂಭಿಕ ಆಟಗಾರ ಶೇನ್ ವಾಟ್ಸನ್ ಅವರು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲುವಂತೆ ಮಾಡಿದರು. ವಿವೋ ಐಪಿಎಲ್ ನ 17ನೇ ಪಂದ್ಯದಲ್ಲಿ 64 ರನ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡಿತು.

ಶುಕ್ರವಾರ ನಡೆದ ಪಂದ್ಯದಲ್ಲಿ 205 ರನ್ ಗುರಿಯ ಬೆನ್ನು ಹತ್ತಿದ ರಾಜಸ್ಥಾನ ರಾಯಲ್ಸ್ ತಂಡ ಯಾವುದೇ ಹೋರಾಟ ಮಾಡದೇ 18.3 ಓವರ್ ಗಳಲ್ಲಿ 140 ರನ್ ಗೆ ಆಲೌಟ್ ಆಯಿತು. 13ನೇ ಓವರ್ ನಲ್ಲಿ 96 ರನ್ ಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡ ರಾಜಸ್ಥಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ ಅವರು 45 ರನ್ ಗಳಿಸುವ ಮೂಲಕ ಆಶಾಭಾವನೆ ಮೂಡಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 204 ರನ್ ಗಳಿಸಿತು. ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ವಾಟ್ಸನ್ 51 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ಗಳ ನೆರವಿನಿಂದ 100 ರನ್ ಪೂರೈಸಿದರು. 57 ಎಸೆತಕ್ಕೆ ಭರ್ಜರಿ 106 ರನ್ ದಾಖಲಿಸಿ ಪೆವಿಲಿಯನ್ ಕಡೆ ಸಾಗಿದರು.

ಚೆನ್ನೈ ಪರ ಇನ್ನಿಂಗ್ಸ್ ಆರಂಭಿಸಿದ ವಾಟ್ಸನ್ ಹಾಗೂ ಅಂಬಟಿ ಮೊದಲ ವಿಕೆಟ್ ಗೆ 4.3 ಓವರ್ ಗಳಲ್ಲಿ 50 ರನ್ ಗಳಿಸಿ ಉತ್ತಮ ಆರಂಭ ಮಾಡಿದರು. ಗಾಯದಿಂದ ಚೇತರಿಸಿಕೊಂಡಿರುವ ಸುರೇಶ್ ರೈನಾ ಅವರು ಕೂಡ ವೇಗದ ಆಟಕ್ಕೆ ಮೊರೆ ಹೋಗಿ 29 ಎಸೆತಗಳಲ್ಲಿ 46 ರನ್ ಗಳಿಸಿದರು.

ರೈನಾ ಔಟಾದ ಬೆನ್ನಿಗೆ ನಾಯಕ ಎಂ.ಎಸ್ ಧೋನಿ ಕೇವಲ 5 ರನ್ ಮಾತ್ರ ಗಳಿಸಿದರೆ, ಬಿಲ್ಲಿಂಗ್ಸ್ 3 ರನ್ ಗೆ ತೃಪ್ತಿ ಪಟ್ಟುಕೊಂಡರು.