ದಕ್ಷಿಣ ವಲಯ ಅಂತರ್ ವಿವಿ ಪುರುಷರ ವಿಭಾಗದ ಕೋಕೊ ಪಂದ್ಯಾಟ

ದಕ್ಷಿಣ ವಲಯ ಅಂತರ್ ವಿವಿ ಪುರುಷರ ವಿಭಾಗದ ಕೋಕೊ ಪಂದ್ಯಾಟ

MK   ¦    Jan 11, 2017 10:49:55 AM (IST)

ಉಳ್ಳಾಲ: ರಾಜ್ಯದಲ್ಲಿ ಪ್ರಥಮವಾಗಿ ಮಂಗಳೂರು ವಿಶ್ವವಿದ್ಯಾನಿಲಯ  ಕ್ರೀಡಾನೀತಿಯನ್ನು ಜಾರಿಗೊಳಿಸುವ ಮೂಲಕ ಕ್ರೀಡೆಗೆ  ಹೆಚ್ಚಿನ ಒತ್ತನ್ನು ನೀಡಿದೆ.  ಇದು ಇತರೆ ವಿ.ವಿಗಳಿಗೂ ಮಾದರಿಯಾಗಲಿ ಎಂದು ಯುವಜನ, ಕ್ರೀಡಾ ಮತ್ತು ಮೀನಿಗಾರಿಕಾ ಸಚಿವ ಪ್ರಮೋದ್ ಮದ್ವರಾಜ್ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ ಇದರ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿವಿ ಪುರುಷರ ವಿಭಾಗದ  ಕೋಕೊ ಪಂದ್ಯಾಟದ ಉದ್ಘಾಟನೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಕ್ರಿಯಾಶೀಲ ಬೆಳವಣಿಗೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ  ವಿದ್ಯಾರ್ಥಿಗಳ ಆರೋಗ್ಯಯುತ ಬೆಳವಣಿಗೆಗೆ ಸಹಕಾರಿಯಾಗಿದೆ.  ಧೈರ್ಯ ಮತ್ತು ಸಂಕಲ್ಪವನ್ನು ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದೆ. ಗೋಡೆಗಳೊಳಗೆ ಇರುವ ಬದಲು  ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಜೀವನದ ವಿಶೇಷತೆಗಳನ್ನು ಕಲಿಯಲು ಉತ್ತಮ ಅವಕಾಶವಾಗಿದೆ. ಕ್ರೀಡಾ ನೀತಿ ಮತ್ತು ಕ್ರೀಡಾ ಮಾರ್ಗಸೂಚಿಗಳನ್ನು ತಯಾರಿಸಿರುವ ಮಂಗಳೂರು ವಿ.ವಿ ಇತರೆ ವಿ.ವಿಗಳಿಗೆ ಮಾದರಿಯಾಗಿದೆ.   ಸರಕಾರ  ಜಾರಿಗೆ ತರುವ ಮುನ್ನವೇ ವಿ.ವಿ ಕ್ರೀಡಾನೀತಿಯನ್ನು ಜಾರಿಗೊಳಿಸಿರುವುದು ಕ್ರೀಡೆಯ ಬಗೆಗಿನ ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ. ಆದರೆ ನೀತಿಗಳು ಪುಸ್ತಕಗಳಿಗೆ ಸೀಮಿತವಾಗಿರದೆ ಅನುಷ್ಠಾನಕ್ಕೂ ಬರಬೇಕಿದೆ ಎಂದು ಸಲಹೆ ನೀಡಿದ ಅವರು ಕೇಂದ್ರ  ಹಾಗೂ ರಾಜ್ಯ ಸರಕಾರದಿಂದ ಕ್ರೀಡೆಗೆ  ಕಡಿಮೆ ಅನುದಾನಗಳು ದೊರೆಯುತ್ತಿದೆ. ಆದರೆ ವಾಸ್ತವವಾಗಿ ಆರೋಗ್ಯ ಇಲಾಖೆಗೆ ನೀಡುವ ಅನುದಾನವನ್ನು ಕ್ರೀಡೆಗೆ ನೀಡಿದಲ್ಲಿ ಆಸ್ಪತ್ರೆಗಳು ಖಾಲಿಯಾಗಿ ಉಳಿದು ಎಲ್ಲರೂ ಆರೋಗ್ಯವಂತರಾಗಿ  ಬದುಕಬಹುದಾಗಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಹಾಜರಾತಿ, ಕೃಪಾಂಕ ಜೊತೆಗೆ ನಗದು ಬಹುಮಾನ ನೀಡಿ ಗೌರವಿಸುವ ಕೆಲಸವನ್ನು ವಿವಿ ಪ್ರತೀ ವರ್ಷ ಮಾಡುತ್ತಿದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಕ್ಕೊ ಕ್ರೀಡೆಯಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಎಸ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ತಿರುಪತಿಯಲ್ಲಿ ಸಿ.ವಿ.ರಾಮನ್ ಪ್ರಶಸ್ತಿಯನ್ನು ಪಡೆದುಕೊಂಡ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಅವರು ವಂದಿಸಿದರು. ಮಂಗಳೂರು ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಿಯಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮಕ್ಕೆ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು. ಕೊಕ್ಕೋ ಕ್ರೀಡಾ ಕೂಟದಲ್ಲಿ ತಮಿಳು ನಾಡು, ಕರ್ನಾಟಕ, ಕೇರಳ, ಆಂದ್ರಪ್ರದೇಶ, ಪಾಂಡಿಚೇರಿ ರಾಜ್ಯಗಳ ವಿವಿ ವಿಶ್ವವಿದ್ಯಾನಿಲಯಗಳ ಸುಮಾರು 53 ತಂಡಗಳು ಭಾಗವಹಿಸಿವೆ.