ಇಂದೋರ್: ಇಂದಿಲ್ಲಿ ಆರಂಭವಾದ ಮೊದಲ ಟೆಸ್ಟ್ ನಲ್ಲಿ ಬಾಂಗ್ಲಾದೇಶವನ್ನು ಕೇವಲ 150 ರನ್ ಗಳಿಗೆ ಆಲೌಟ್ ಮಾಡಿದ ಭಾರತದ ಬೌಲರ್ ಗಳು, ದಿನದಾಟದ ಗೌರವ ಪಡೆಯಲು ನೆರವಾಗಿದ್ದಾರೆ.
ಮಯಾಂಕ್ ಅಗರ್ವಾಲ್(37) ಮತ್ತು ಚೇತೇಶ್ವರ ಪೂಜಾರ(43) 72 ರನ್ ಗಳ ಉತ್ತಮ ಜತೆಯಾಟದ ನೆರವಿನಿಂದ ಮೊದಲ ದಿನದಾಟದಂತ್ಯಕ್ಕೆ ಭಾರತ ಒಂದು ವಿಕೆಟ್ ಕಳಕೊಂಡು 86 ರನ್ ಮಾಡಿದೆ. ಆರಂಭಿಕ ರೋಹಿತ್ ಶರ್ಮಾ ಕೇವಲ 6 ರನ್ ಮಾಡಿ ಅಬು ಜಾಯೆದ್ ಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಭಾರತೀಯ ಬೌಲರ್ ಗಳ ಸಂಘಟಿತ ಪ್ರಯತ್ನದ ಫಲವಾಗಿ ಬಾಂಗ್ಲಾ ಕೇವಲ 150 ರನ್ ಗಳಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಗಂಟುಮೂಟೆ ಕಟ್ಟಿಕೊಂಡಿತು. ಮೊಹಮ್ಮದ್ ಶಮಿ 3, ಇಶಾಂತ್ ಶರ್ಮಾ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್ ತಲಾ ಎರಡೆರಡು ವಿಕೆಟ್ ಉರುಳಿಸಿದರು.