ಅಡಿಲೇಡ್: ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಮುಂದೆ ತಲೆಬಾಗಿದ ವಿರಾತ್ ಕೊಹ್ಲಿ ಪಡೆಗೆ ಮೊದಲ ಟೆಸ್ಟ್ ನ ಮೊದಲ ದಿನದಲ್ಲಿ ಶತಕವೀರ ಚೇತೇಶ್ವರ ಪೂಜಾರ ಆಸರೆಯಾದರು.
ಓವರ್ ಕ್ರೀಡಾಂಗಣದಲ್ಲಿ ಆರಂಭವಾದ ಬಾರ್ಡರ್-ಗಾವರ್ಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪೂಜಾರ ಕುಸಿದ ಭಾರತದ ಬ್ಯಾಟಿಂಗ್ ಪಾಳಯಕ್ಕೆ ಆಸೆಯಾಗಿ ನಿಂತು 246 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 123 ರನ್ ಬಾರಿಸಿದರು. ದಿನದಾಟ ಕೊನೆಗೊಳ್ಳಲು ಕೆಲವೇ ನಿಮಿಷಗಳಿರುವಾಗ ಪೂಜಾರ ರನೌಟ್ ಆಗುವ ಮೂಲಕ ದಿನದಾಟ ಕೊನೆಗೊಂಡಿತು.
ಭಾರತ ಮೊದಲ ದಿನದಾಟದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 250 ರನ್ ಮಾಡಿದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಎರಡನೇ ದಿನ ಬ್ಯಾಟಿಂಗ್ ಆರಂಭಿಸಲಿರುವರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಸೀಸ್ ವೇಗಗಳು ಆರಂಭದಲ್ಲೇ ಆಘಾತವಿಕ್ಕಿದರು. ಆರಂಭಿಕರಾದ ಕೆ.ಎಲ್. ರಾಹುಲ್(02) ಮತ್ತು ಮುರಳಿ ವಿಜಯ್(11) ಬೇಗನೆ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರ ಬಳಿಕ ಬಂದ ಕಪ್ತಾನ ವಿರಾಟ್ ಕೊಹ್ಲಿ, ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಉಸ್ಮಾನ್ ಖ್ವಾಜಾ ಹಿಡಿದ ಆಕರ್ಷಕ ಕ್ಯಾಚ್ ಗೆ ಬಲಿಯಾದರು. ರಹಾನೆ ಕೂಡ 13 ರನ್ ಮಾಡಿ ನಿರ್ಗಮಿಸಿದರು.
ಇದರ ಬಳಿಕ ಪೂಜಾರ ಮತ್ತು 37 ರನ್ ಮಾಡಿದ ರೋಹಿತ್ ಶರ್ಮಾ ಉತ್ತಮ ಜತೆಯಾಟ ನಡೆಸಿ ತಂಡಕ್ಕೆ ಆಧಾರವಾದರು. ರಿಷಬ್ ಪಂತ್ ಮತ್ತು ಅಶ್ವಿನ್ ತಲಾ 25 ರನ್ ದೇಣಿಗೆ ನೀಡಿದರು.
ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ ವುಡ್, ಪ್ಯಾಟ್ ಕಮಿನ್ಸ್, ಸ್ಪಿನ್ನರ್ ನೇಥನ್ ಲಿಯೊನ್ ತಲಾ ಎರಡು ವಿಕೆಟ್ ಪಡೆದು ಕೊಹ್ಲಿ ಪಡೆ ಬ್ಯಾಟ್ಸ್ ಮೆನ್ ಗಳಿಗೆ ಆಘಾತವಿಕ್ಕಿದರು.