ಟೀಂ ಇಂಡಿಯಾದ ಕೋಚ್ ಹುದ್ದೆಗೆ ಹೊಸ ಆಯ್ಕೆ ಸಾಧ್ಯತೆ

ಟೀಂ ಇಂಡಿಯಾದ ಕೋಚ್ ಹುದ್ದೆಗೆ ಹೊಸ ಆಯ್ಕೆ ಸಾಧ್ಯತೆ

HSA   ¦    Jul 16, 2019 06:40:14 PM (IST)
ಟೀಂ ಇಂಡಿಯಾದ ಕೋಚ್ ಹುದ್ದೆಗೆ ಹೊಸ ಆಯ್ಕೆ ಸಾಧ್ಯತೆ

ಮುಂಬಯಿ: ವಿಶ್ವಕಪ್ ನ ಸೆಮಿಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾದ ತರಬೇತಿ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಒಪ್ಪಂದದ ಅವಧಿಯು ಆಗಸ್ಟ್-ಸಪ್ಟೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಕೊನೆಗೊಳ್ಳಲಿದ್ದು, ಇದರ ಬಳಿಕ ಹೊಸ ಆಯ್ಕೆ ನಡೆಯಲಿದೆ.

ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಒಪ್ಪಂದವು ಮುಕ್ತಾಯವಾಗುತ್ತಿದೆ. ರವಿಶಾಸ್ತ್ರಿ ಸಹಿತ ಇವರೆಲ್ಲರೂ ಮರು ನೇಮಕಕ್ಕೆ ಅರ್ಜಿ ಸಲ್ಲಿಸಬಹುದು.

ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಮತ್ತು ಟ್ರೈನರ್ ಶಂಕರ್ ಬಸು ಅವರು ವಿಶ್ವಕಪ್ ಬಳಿಕ ತಮ್ಮ ಹುದ್ದೆ ತ್ಯಜಿಸಿದ್ದಾರೆ. ಈ ಸ್ಥಾನಕ್ಕೆ ಕೂಡ ಆಯ್ಕೆ ನಡೆಯಲಿದೆ. ಟೀಂ ಇಂಡಿಯಾದ ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಇವರಿಬ್ಬರ ಪಾತ್ರ ಮಹತ್ವದ್ದಾಗಿತ್ತು.

2017ರ ಜುಲೈಯಲ್ಲಿ ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್ ಹುದ್ದೆ ಸ್ವೀಕರಿಸಿದ್ದರು. ಅವರು ಅನಿಲ್ ಕುಂಬ್ಳೆ ಬಳಿಕ ಈ ಸ್ಥಾನ ಪಡೆದಿದ್ದರು. ರವಿಶಾಸ್ತ್ರಿ ಒಪ್ಪಂದವನ್ನು 45 ದಿನಗಳ ಕಾಲ ಮುಂದುವರಿಸಲಾಗಿತ್ತು.

ದೇಶೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರು ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಲಿರುವರು. ರವಿಶಾಸ್ತ್ರಿ ಅವರನ್ನು ಮುಂದುವರಿಸಬೇಕೇ ಅಥವಾ ಹೊಸ ಕೋಚ್ ಆಯ್ಕೆ ಮಾಡಬೇಕೇ ಎಂಬ ನಿರ್ಧಾರವನ್ನು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ತೆಗೆದುಕೊಳ್ಳಲಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸದಸ್ಯರಾಗಿದ್ದಾರೆ.