ಖೋಖೋ ಪಂದ್ಯಕ್ಕೆ ಸಜ್ಜಾದ ಮೈವಿವಿ ತಂಡ!

ಖೋಖೋ ಪಂದ್ಯಕ್ಕೆ ಸಜ್ಜಾದ ಮೈವಿವಿ ತಂಡ!

Jan 09, 2017 12:27:13 PM (IST)

ಮೈಸೂರು: ನಾಲ್ಕು  ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿರುವ 2016-17ನೇ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯಗಳ ಖೋಖೋ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪ್ರವೀಣ್ ಕುಮಾರ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಪಂದ್ಯಾವಳಿ ಮಂಗಳೂರಿನ ಮಂಗಳಗಂಗೋತ್ರಿ ಆವರಣದಲ್ಲಿ ಜ.10 ರಿಂದ 13ರವರೆಗೆ ನಡೆಯಲಿದ್ದು, ದಕ್ಷಿಣ ವಲಯಕ್ಕೆ ಸೇರುವ ವಿವಿಗಳ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಹೀಗಾಗಿ ಸ್ಪರ್ಧೆ ತೀವ್ರ ಮಟ್ಟದಲ್ಲಿ ಏರ್ಪಡುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ಮೈಸೂರು ವಿವಿ ತಂಡದಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಪ್ರವೀಣ್ ಕುಮಾರ್ ನಾಯಕನಾಗಿರುವ ತಂಡದಲ್ಲಿ ಪ್ರಸನ್ನ, ಕೆ.ಬಿ.ಸಚಿನ್ ಬಾಬು, ಕೆ.ನೂತನ್, ಸುದರ್ಶನ, ಕೆ.ಪಿ.ಸಂದೀಪ, ಎ.ವಿ.ಮಧು, ಎಂ.ಅರುಣ್, ರವಿಕುಮಾರ್, ಜೆ.ಎಸ್.ಕಿರಣ, ದಿಲೀಪ್ಕುಮಾರ್ ಮತ್ತು ಬಿ.ರಕ್ಷಿತ್ ಇದ್ದಾರೆ. ತಂಡದ ಕೋಚ್ ಆಗಿ ಡಾ. ಪಿ.ಕೃಷ್ಣಯ್ಯ, ಮ್ಯಾನೇಜರ್ ಆಗಿ ಮಹೇಂದ್ರ ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ.

ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಪಡೆಯುವ ವಿಶ್ವಾಸ ತಂಡದ್ದಾಗಿದೆ. ಕ್ರೀಡೆ ಎಂದರೆ ಕ್ರಿಕೆಟ್ ಎಂಬಂತಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಯಾಗಿ ತಲತಲಾಂತರದಿಂದ ಬಂದಿರುವ ಖೋಖೋಗೆ ಪ್ರೋತ್ಸಾಹ ನೀಡಿ ಪಂದ್ಯಾವಳಿ ನಡೆಸುತ್ತಿದ್ದು, ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರದು ಗೆಲುವು ಸಾಧಿಸಿ ಬರಲಿ ಎನ್ನುವುದು ತಂಡದ ಅಭಿಮಾನಿಗಳ ಹಾರೈಕೆಯಾಗಿದೆ.