ಯೂಸುಫ್ ಪಠಾಣ್ ಮೇಲಿನ ನಿಷೇಧ ಹಿಂಪಡೆದ ಬಿಸಿಸಿಐ

ಯೂಸುಫ್ ಪಠಾಣ್ ಮೇಲಿನ ನಿಷೇಧ ಹಿಂಪಡೆದ ಬಿಸಿಸಿಐ

HSA   ¦    Jan 09, 2018 02:39:03 PM (IST)
ಯೂಸುಫ್ ಪಠಾಣ್ ಮೇಲಿನ ನಿಷೇಧ ಹಿಂಪಡೆದ ಬಿಸಿಸಿಐ

ನವದೆಹಲಿ: ನಿಷೇಧಿತ ದ್ರವ್ಯ ಸೇವನೆ ಮಾಡಿದ್ದ ಬರೋಡಾದ ಆಲ್ ರೌಂಡರ್ ಯೂಸುಫ್ ಪಠಾಣ್ ಗೆ ಹೇರಲಾಗಿದ್ದ ಐದು ತಿಂಗಳ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಿಂದಕ್ಕೆ ಪಡೆದುಕೊಂಡಿದೆ.

ಕೆಮ್ಮಿಗೆ ತೆಗೆದುಕೊಳ್ಳುವ ಸಿರಫ್ ನಲ್ಲಿ ಇರುವಂತಹ ಕೆಲವೊಂದು ನಿಷೇಧಿತ ಔಷಧಿಯನ್ನು ಯೂಸುಫ್ ಪಠಾಣ್ ಸೇವನೆ ಮಾಡಿದ್ದರು ಎಂದು ಬಿಸಿಸಿಐಯ ಗೌರವ ಕಾರ್ಯದರ್ಶಿ ಅಮಿತಾಭ್ ಚೌಧರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕಳೆದ ವರ್ಷ ಮಾರ್ಚ್ 16ರಂದು ನಡೆದ ದೇಶೀಯ ಟಿ-20 ಪಂದ್ಯದ ವೇಳೆ ಯೂಸುಫ್ ಮೂತ್ರದ ಮಾದರಿಯನ್ನು ಬಿಸಿಸಿಐಯ ಉದ್ದೀಪನಾ ದ್ರವ್ಯ ನಿಷೇಧ ಪರೀಕ್ಷಾ ಕಾರ್ಯಕ್ರಮಕ್ಕೆ ನೀಡಿದ್ದರು. ವಾಡಾದ ನಿಷೇಧಿತ ಪಟ್ಟಿಯಲ್ಲಿರುವ ಟೆರ್ಬುಟಲೈನ್ ಯೂಸುಫ್ ಮೂತ್ರದ ಮಾದರಿಯಲ್ಲಿ ಪತ್ತೆಯಾಗಿತ್ತು. ಅಕ್ಟೋಬರ್ 27, 2017ರಂದು ಯೂಸುಫ್ ಗೆ ಉದ್ದೀಪನಾ ದ್ರವ್ಯ ನಿಯಮ ಉಲ್ಲಂಘನೆ ಪ್ರಕಾರ ನಿಷೇಧ ಹೇರಲಾಗಿತ್ತು.

ತನಗೆ ಈ ಔಷಧಿಯನ್ನು ತಪ್ಪಾಗಿ ನೀಡಿರುವ ಕಾರಣದಿಂದ ಅದು ಮೂತ್ರ ಮಾದರಿಯಲ್ಲಿ ಪತ್ತೆಯಾಗಿದೆ. ವೈದ್ಯಕೀಯವಾಗಿ ನನಗೆ ಸೂಚಿಸಿದ್ದ ಔಷಧಿ ಬೇರೆ ಇತ್ತು ಎಂದು ಯೂಸುಫ್ ವಿವರಣೆ ನೀಡಿದ ಬಳಿಕ ಬಿಸಿಸಿಐ ನಿಷೇಧ ಹಿಂತೆಗೆದುಕೊಂಡಿದೆ.