ಜಿಲ್ಲಾ ಮಟ್ಟದ ಹಾಕಿ : ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಮತ್ತು ಹಾತೂರು ಸ್ಫೋರ್ಟ್ಸ್ ಕ್ಲಬ್ ಫೈನಲ್ ಗೆ ಲಗ್ಗೆ

ಜಿಲ್ಲಾ ಮಟ್ಟದ ಹಾಕಿ : ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಮತ್ತು ಹಾತೂರು ಸ್ಫೋರ್ಟ್ಸ್ ಕ್ಲಬ್ ಫೈನಲ್ ಗೆ ಲಗ್ಗೆ

Jan 08, 2017 12:15:25 PM (IST)

ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಅತಿಥೇಯ ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಹಾಗು ಹಾತೂರು ಸ್ಫೋರ್ಟ್ಸ್ ಕ್ಲಬ್ ತಂಡಗಳು ಫೈನಲ್ ಪ್ರವೇಶಿಸಿವೆ.

ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್, ಹಾಕಿ ಕೂರ್ಗ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ.ಸುನಿಲ್ ತಂದೆ ದಿ. ವಿಠಲಾಚಾರ್ಯ ಸ್ಮಾರಕ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟ ನಡೆಯುತ್ತಿದೆ.

ಪ್ರಥಮ ಸೇಮಿಸ್ ನಲ್ಲಿ ಹಾತೂರು ಸ್ಫೋರ್ಟ್ಸ್ ಕ್ಲಬ್ ತಂಡ, ಒಂದು ಗೋಲಿನ ಅಂತರದಲ್ಲಿ ಎಂ.ಆರ್.ಎಫ್ ಮೂರ್ನಾಡು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. 26ನೇ ನಿಮಿಷದಲ್ಲಿ ನಯಿಂ ಗೆಲುವಿನ ಗೋಲು ಹೊಡೆದರು.

ಎರಡನೇ ಸೆಮಿಫೈನಲ್ ನಲ್ಲಿ ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಹಾಗು ಚಾರ್ಮರ್ಸ್ ಮಡಿಕೇರಿ ತಂಡದ ನಡುವೆ ರೋಚಕ ಹಣಾಹಣಿ ನಡೆಯಿತು. 53 ನೇ ನಿಮಿಷದ ತನಕ ಎರಡು ತಂಡಗಳು ತಲಾ ಒಂದು ಗೋಲುಗಳಿಸಿದ್ದವು. 53ನೇ ನಿಮಿಷದಲ್ಲಿ ಡಾಲ್ಫಿನ್ಸ್ ನ ಅಭರಣ್ ಎರಡನೇ ಗೋಲು ಗಳಿಸುವ ಮೂಲಕ ಫೈನಲ್ ದಾರಿಯನ್ನು ಸುಗಮಗೊಳಿಸಿದರು. 12ನೇ ನಿಮಿಷದಲ್ಲಿ ಪೃಥ್ವಿ ಮೊದಲ ಗೋಲು ಗಳಿಸಿದರೆ, ಚಾರ್ಮರ್ಸ್ ನ ರಾಜಪರಮಲು 45ನೇ ನಿಮಿಷದಲ್ಲಿ ಗೋಲುಗಳಿಸಿದರು.

ಫೈನಲ್ ಪಂದ್ಯಾಟ ಭಾನುವಾರ ಸಂಜೆ 3ಗಂಟೆಗೆ ನಡೆಯಲಿದೆ. ತೀರ್ಪುಗಾರರಾಗಿ ಹಾಕಿ ಕೂರ್ಗ್ ನ ನೆಲ್ಲಮಕ್ಕಡ ಪವನ್, ಕೋಡಿಮಣಿಯಂಡ ಗಣಪತಿ, ಕಾಟುಮಣಿಯಂಡ ಕಾರ್ತಿಕ್ ಕಾರ್ಯಪ್ಪ, ಚೋಯಮಾಡಂಡ ಚಂಗಪ್ಪ, ಚೇಯಂಡ ಅಪ್ಪಚ್ಚು, ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ವಿನೋದ್ ಅವರುಗಳು ಕಾರ್ಯನಿರ್ವಹಿಸಿದರು.

ಭಾನುವಾರ ಸಂಜೆ 4-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಸರ್ಕಾರದ ಮೀನುಗಾರಿಕೆ ಹಾಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನ ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್, ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಎಚ್.ಎನ್.ಅಶೋಕ್,  ಕುಶಾಲನಗರ ಎಸ್ಎಲ್ಎನ್ ಕಾಫಿಯ ಸಾತಪ್ಪನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಿಕಟಪೂರ್ವ ಸರ್ಕಾರಿ ಅಭಿಯೋಜಕ ಚಂದ್ರಮೌಳಿ, ದಾನಿಗಳಾದ ಹರಪಳ್ಳಿ ರವೀಂದ್ರ, ಹಾಕಿ ಕೂರ್ಗ್ ಅಧ್ಯಕ್ಷ ಕಾಳಯ್ಯ, ಹಾಕಿ ಕರರ್ನಾಟಕ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ, ಒಲಂಪಿಯನ್ ಎಸ್.ವಿ.ಸುನಿಲ್, ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಆರ್.ರಘುನಾಥ್, ಆರ್.ವಿ.ರಘು ಪ್ರಸಾದ್, ಪಿ.ಆರ್.ಶ್ರೀಜೇಶ್, ವಿಕ್ರಂಕಾಂತ್, ಅರ್ಜುನ್ ಹಾಲಪ್ಪ, ಎಸ್.ವಿ.ವಿನಯ್, ಹರಿಪ್ರಸಾದ್, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.