ಅಂತಾರಾಷ್ಟ್ರೀಯ ಕ್ರಿಕೆಟಿಗೆ ಆಶೀಸ್ ನೆಹ್ರಾ ಗುಡ್ ಬೈ

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಆಶೀಸ್ ನೆಹ್ರಾ ಗುಡ್ ಬೈ

Oct 12, 2017 01:59:43 PM (IST)
ಅಂತಾರಾಷ್ಟ್ರೀಯ ಕ್ರಿಕೆಟಿಗೆ ಆಶೀಸ್ ನೆಹ್ರಾ ಗುಡ್ ಬೈ

ನವದೆಹಲಿ: ಹಿರಿಯ ವೇಗಿ ಆಶೀಸ್ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದ್ದು, ನವಂಬರ್ 1ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ನೆಹ್ರಾ, ಮೊದಲ ಎರಡು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿಲ್ಲ.

ನೆಹ್ರಾ ತನ್ನ ನಿರ್ಧಾರವನ್ನು ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಕಪ್ತಾನ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿರುವುದಾಗಿ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಮುಂದಿನ ವರ್ಷ ಐಸಿಸಿ ಯಾವುದೇ ಟಿ20 ವೇಳಾಪಟ್ಟಿ ಬಿಡುಗಡೆ ಮಾಡದೆ ಇರುವ ಕಾರಣದಿಂದ ಯುವಕರಿಗೆ ಅವಕಾಶ ನೀಡುವ ದೃಷ್ಟಿಯಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿದರು.

ನೆಹ್ರಾ 1999ರಲ್ಲಿ ಮೊಹಮ್ಮದ್ ಅಜರುದ್ಧೀನ್ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದರು. 17 ಟೆಸ್ಟ್, 120 ಏಕದಿನ ಮತ್ತು 26 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ನೆಹ್ರಾ 44 ಟೆಸ್ಟ್ ವಿಕೆಟ್, 157 ಏಕದಿನ ಮತ್ತು 34 ಟಿ20 ವಿಕೆಟ್ ಕಬಳಿಸಿದ್ದರು.

ಗಾಯಾಳು ಸಮಸ್ಯೆಯಿಂದಾಗಿ ಆಗಾಗ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದ ನೆಹ್ರಾ ತನ್ನ ಹುಟ್ಟೂರಿನ ಮೈದಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವರು.

2003ರಲ್ಲಿ ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ನೆಹ್ರಾ 23 ರನ್ ಗಳಿಗೆ ಆರು ವಿಕೆಟ್ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ಅನಾರೋಗ್ಯದ ಹೊರತಾಗಿಯೂ ನೆಹ್ರಾ ಆಡಿದ್ದರು. 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲೂ ನೆಹ್ರಾ ಆಡಿದ್ದರು. ಆದರೆ ಕೈಬೆರಳಿನ ಗಾಯದಿಂದಾಗಿ ಫೈನಲ್ ಪಂದ್ಯ ಆಡಲು ಸಾಧ್ಯವಾಗಿರಲಿಲ್ಲ.