ಮೇ 13ರಿಂದ ಪ್ರೀಮಿಯರ್ ಕಬಡ್ಡಿ ಲೀಗ್ ಆರಂಭ

ಮೇ 13ರಿಂದ ಪ್ರೀಮಿಯರ್ ಕಬಡ್ಡಿ ಲೀಗ್ ಆರಂಭ

HSA   ¦    Apr 12, 2019 05:54:50 PM (IST)
ಮೇ 13ರಿಂದ ಪ್ರೀಮಿಯರ್ ಕಬಡ್ಡಿ ಲೀಗ್ ಆರಂಭ

ಮೈಸೂರು: ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ನ ಮೊದಲ ಆವೃತ್ತಿ ಮೇ 13ರಿಂದ ಜೂ.4 ರವರೆಗೆ ನಡೆಯಲಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್ ಕಾರ್ಯದರ್ಶಿ ಎಂ.ವಿ.ಪ್ರಸಾದ್ ಬಾಬು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೀಗ್ ಮೇ 13ರಂದು ಪುಣೆಯಲ್ಲಿ ಆರಂಭವಾಗಲಿದ್ದು ಬ್ರಾಂಡ್ ಅಂಬಾಸಿಡರ್ ಆಗಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಚಾಲನೆ ನೀಡಲಿದ್ದಾರೆ. 4800 ಆಟಗಾರರು ಫೆಡರೇಷನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, 160 ಆಟಗಾರರನ್ನು ಆಯ್ಕೆ ಮಾಡಲಾಗಿದೆ. 16 ವಿದೇಶಿ ಆಟಗಾರರು ಸಹ ಇರಲಿದ್ದಾರೆ. ಲಕ್ಕಿ ಡಿಪ್ ಮೂಲಕ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲಿದ್ದು, ಒಟ್ಟು 8 ತಂಡಗಳು ಭಾಗವಹಿಸಲಿವೆ ಎಂದರು.

ಮೇ 13ರಿಂದ 21ರವರೆಗೆ ಪುಣೆಯಲ್ಲಿ, ಮೇ 22ರಿಂದ 30ರವರೆಗೆ ಮೈಸೂರಿನ ಚಾಮುಂಡಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಜೂ.1ರಿಂದ 4ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯಗಳು ನಡೆಯಲಿವೆ. ಒಟ್ಟು 44 ಪಂದ್ಯಗಳು ನಡೆಯಲಿದ್ದು ಡಿ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿವೆ ಎಂದರು.

ವಿಜೇತ ತಂಡಕ್ಕೆ ಮೊದಲ ಬಹುಮಾನವಾಗಿ 1.25 ಕೋಟಿ, ದ್ವಿತೀಯ ಬಹುಮಾನ 75 ಲಕ್ಷ, ತೃತೀಯ ಬಹುಮಾನ 50 ಲಕ್ಷ ಹಾಗೂ ನಾಲ್ಕನೇ ಬಹುಮಾನವಾಗಿ 25 ಲಕ್ಷ ನೀಡಲಾಗುವುದು. ಅಲ್ಲದೆ ಲೀಗ್‍ನ ಆದಾಯದಲ್ಲಿ ಶೇ.20ರಷ್ಟನ್ನು ಆಟಗಾರರಿಗೆ, ಶೇ.10ರಷ್ಟು ಆದಾಯವನ್ನು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ, ಮಾಜಿ ಆಟಗಾರರ ವೆಲ್ ಫೇರ್ ಅಸೋಸಿಯೇಷನ್ ಗೆ 10ರಷ್ಟು ಆದಾಯ ನೀಡಲಾಗುವುದು ಎಂದರು.

ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಪ್ರೋತ್ಸಾಹಿಸಿ, ಆಟಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಆಟಗಾರರ ಗ್ರೇಡ್‍ಗೆ ತಕ್ಕಂತೆ ಸಂಭಾವನೆ ನೀಡುತ್ತಿದ್ದು ಎ ಗ್ರೇಡ್ ಆಟಗಾರರಿಗೆ 10 ಲಕ್ಷ, ಬಿ ಗ್ರೇಡ್ ಆಟಗಾರರಿಗೆ 8 ಲಕ್ಷ, ಸಿ ಗ್ರೇಡ್ ಆಟಗಾರರಿಗೆ 6 ಲಕ್ಷ, ಡಿ ಗ್ರೇಡ್ ಆಟಗಾರರಿಗೆ 2-4 ಲಕ್ಷ ನೀಡಲಾಗುವುದು. ಭವಿಷ್ಯದಲ್ಲಿ ಖೋ ಖೋ, ವಾಲೀಬಾಲ್ ಲೀಗ್ ಆರಂಭಿಸುವ ಚಿಂತನೆ ಇದೆ ಎಂದರು.

ಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಆಟಗಾರ ಮೈಪಾಲ್ ಸಿಂಗ್ ಸೇರಿದಂತೆ ಇನ್ನಿತರರು ಹಾಜರಿದ್ದರು.