ಚಂದಿಮಾಲ್, ಮ್ಯಾಥ್ಯೂಸ್ ಶತಕ: ಲಂಕಾಗೆ ಇನ್ನಿಂಗ್ಸ್ ಹಿನ್ನಡೆ

ಚಂದಿಮಾಲ್, ಮ್ಯಾಥ್ಯೂಸ್ ಶತಕ: ಲಂಕಾಗೆ ಇನ್ನಿಂಗ್ಸ್ ಹಿನ್ನಡೆ

HSA   ¦    Dec 04, 2017 05:49:26 PM (IST)
ಚಂದಿಮಾಲ್, ಮ್ಯಾಥ್ಯೂಸ್ ಶತಕ: ಲಂಕಾಗೆ ಇನ್ನಿಂಗ್ಸ್ ಹಿನ್ನಡೆ

ನವದೆಹಲಿ: ನಿರ್ಜೀವ ಪಿಚ್ ನಲ್ಲಿ ದಿನೇಶ್ ಚಂದಿಮಾಲ್ ಮತ್ತು ಆ್ಯಂಜಲೋ ಮ್ಯಾಥ್ಯೂಸ್ ಬಾರಿಸಿದ ಶತಕಗಳ ಮುಂದೆ ಹೆಣಗಾಡಿದ ಭಾರತದ ಬೌಲರ್ ಗಳು ದಿನದ ಅಂತಿಮ ಅವಧಿಯಲ್ಲಿ ವಿಕೆಟ್ ಕಬಳಿಸಿ ಶ್ರೀಲಂಕಾವನ್ನು ನಿಯಂತ್ರಿಸಿದ್ದಾರೆ.

ತೃತೀಯ ಹಾಗೂ ಅಂತಿಮ ಟೆಸ್ಟ್ ನ ಮೂರನೇ ದಿನದ ಅಂತ್ಯದ ವೇಳೆಗೆ ಲಂಕಾ 9 ವಿಕೆಟ್ ಕಳಕೊಂಡು 356 ರನ್ ಮಾಡಿ 180 ರನ್ ಗಳ ಹಿನ್ನಡೆಯಲ್ಲಿದೆ. ಅಂತಿಮ ಅವಧಿಯಲ್ಲಿ ರವಿಚಂದ್ರನ್ ಅಶ್ವಿನ್ 90 ರನ್ ಗಳಿಗೆ ಮೂರು ವಿಕೆಟ್ ಕಬಳಿಸಿದರು. ಶತಕ ಬಾರಿಸಿದ್ದ ಮ್ಯಾಥ್ಯೂಸ್(111), ರೊಶೆನ್ ಸಿಲ್ವಾ(0) ಮತ್ತು ನಿರೋಶನ್ ಡಿಕ್ವೆಲ್(0) ವಿಕೆಟ್ ಉರುಳಿಸಿದ ಅಶ್ವಿನ್ ಭಾರತಕ್ಕೆ ಮರಳಿ ಹಿಡಿತ ಒದಗಿಸಿಕೊಟ್ಟರು. ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್ ಉರುಳಿಸಿ ಲಂಕಾದ ಮಧ್ಯಮ ಸರದಿಗೆ ಆಘಾತವಿಕ್ಕಿದರು.

ಮ್ಯಾಥ್ಯೂಸ್ ತನ್ನ 8ನೇ ಟೆಸ್ಟ್ ಶತಕ ಸಿಡಿಸಿದರೆ, ದಿನೇಶ್ ಚಂದಿಮಾಲ್ 10ನೇ ಶತಕ ಸಿಡಿಸಿ ಶ್ರೀಲಂಕಾವನ್ನು ಫಾಲೋಆನ್ ನಿಂದ ಪಾರು ಮಾಡಿದರು. ಮ್ಯಾಥ್ಯೂಸ್ 14 ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಶ್ರೀಲಂಕಾದ ಕಪ್ತಾನ 262 ಎಸೆತಗಳನ್ನು ಎದುರಿಸಿ 13 ಬೌಂಡರಿ ಬಾರಿಸಿದರು.