ವಿಕಾಸ್ ಪ.ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ವಿಕಾಸ್ ಪ.ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Nov 05, 2019 04:07:40 PM (IST)
ವಿಕಾಸ್ ಪ.ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ನಗರದ ವಿಕಾಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮೇನೇಜರ್ ಪುಷ್ಪರಾಜ್ ಹೆಗ್ಡೆ ಪಿ. ಮಾತನಾಡುತ್ತಾ ಶಿಸ್ತನ್ನು ಬಿಡಬೇಡಿ, ಮುಂದಿನ ಜೀವನಕ್ಕೆ ಶಿಸ್ತು ನಾಂದಿಯಾಗಿರುತ್ತದೆ. ಸೋಲು ಎನ್ನುವುದು ಮುಂದಿನ ಜೀವನಕ್ಕೆ ಸೋಪಾನ. ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಆರೋಗ್ಯ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಕೃಷ್ಣ ಜೆ ಪಾಲೆಮಾರ್ ಅಧ್ಯಕ್ಷ ಸ್ಥಾನವನ್ನು  ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ  ವಿದ್ಯೆಯ ಜೊತೆಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ಕೊಡಬೇಕು, ನಮ್ಮ ಸಂಸ್ಥೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಕ್ರೀಡೆಗೆ ಮಹತ್ವವನ್ನು ಕೊಡುತ್ತಾ ಬಂದಿದ್ದೇವೆ. ಕ್ರೀಡೆ ದೇಶದ ಘನತೆಯನ್ನು ಹೆಚ್ಚಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದವರೆಗೂ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷೆ ನಮ್ಮದು ಎಂದರು.       

 ವೇದಿಕೆಯಲ್ಲಿ ವಿಕಾಸ್ ಎಜ್ಯುಕೇಷನ್ ಟ್ರಸ್ಟಿಗಳಾದ ಜೆ ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಡೀನ್ ಡಾ.ಮಂಜುಳಾ ರಾವ್, ಶೈಕ್ಷಣಿಕ ನಿರ್ದೇಶಕ ಪ್ರೊ. ಟಿ ರಾಜಾರಾಮ್ ರಾವ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸುನೀಲ್ ಬಿ ಎಮ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಐಶ್ವರ್ಯ ಕೆ, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ದೈಹಿಕ ಶಿಕ್ಷಕ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ಶ್ರುತಿ ಕಿಶೋರ್ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ದೀಪಿಕಾ ಶೆಟ್ಟಿ ವಂದಿಸಿದರು, ವಿಜ್ಞಾನ ವಿಭಾಗದ ಉಪನ್ಯಾಸಕಿ ದೀಪಿಕಾ ಶೆಟ್ಟಿ ನಿರೂಪಿಸಿದರು.