ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಕೇಂದ್ರ ಉದ್ಘಾಟನೆ

ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಕೇಂದ್ರ ಉದ್ಘಾಟನೆ

Jan 09, 2017 11:50:09 AM (IST)

ಮಡಿಕೇರಿ: ಗೋಣಿಕೊಪ್ಪದ ಸ್ಪೋರ್ಟ್ಸ್  ಅಥಾರಿಟಿ ಆಫ್ ಇಂಡಿಯಾ, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಕೇಂದ್ರವನ್ನು ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವರಾದ ವಿಜಯ್ ಗೋಯಲ್ ಮತ್ತು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಭಾನುವಾರ ಉದ್ಘಾಟಿಸಿದರು. ಭಾರತೀಯ ಕ್ರೀಡಾ ಪ್ರಾಧಿಕಾರದಿಂದ 3 ಕೋಟಿ ರೂ ಹಾಗೂ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಥ್ಲೆಟಿಕ್ಸ್ ಕೇಂದ್ರವನ್ನು ವಿದ್ಯುತ್ ಚಾಲಿತ ಬಟನ್ ಒತ್ತುವ ಮೂಲಕ ಸಚಿವರು ಉದ್ಘಾಟಿಸಿದರು.  

Ashwini Sports Foundation Athletics Centre was inaugurated-1ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಸುಧಾರಣಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕ್ರೀಡಾಪಟುಗಳು ಸಹ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಪ್ರಶಸ್ತಿ ಪಡೆಯುವತ್ತ ಹೆಚ್ಚಿನ ಶ್ರಮವಹಿಸಬೇಕಿದೆ ಎಂದು ವಿಜಯ್ ಗೋಯಲ್ ಅವರು ಸಲಹೆ ಮಾಡಿದರು. ಭಾರತೀಯ ಕ್ರೀಡಾಪಟುಗಳು ಅಥ್ಲೇಟಿಕ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂಬುದು ಇಡೀ ದೇಶದ ಜನರ ಆಶಯವಾಗಿದೆ. ಆ ದಿಸೆಯಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. 2020ಕ್ಕೆ ನಡೆಯುವ ಅಥ್ಲೆಟಿಕ್ ಗೆ ಕ್ರೀಡಾಪಟುಗಳು ಸಿದ್ಧಗೊಳ್ಳುವಂತಾಗಲು ಅಗತ್ಯ ತರಬೇತಿ ಹಾಗೂ ಸಹಕಾರ ನೀಡಲು ಸರ್ಕಾರ ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ಕೇಂದ್ರ ಕ್ರೀಡಾ ಸಚಿವರು ತಿಳಿಸಿದರು.   

ಅಥ್ಲೆಟಿಕ್ಸ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗಳಿಸಿದವರಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.  ಜೊತೆಗೆ ಕ್ರೀಡಾಕ್ಷೇತ್ರದ ಉನ್ನತ ಪ್ರಶಸ್ತಿ ನಿಡಲಾಗುವುದು. ಪ್ರಸ್ತಾವನೆ ಸಲ್ಲಿಸಿದಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಸಚಿವರು ಹೇಳಿದರು.  ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ ರಾಜ್ಯದಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮೂಲ ಸೌಲಭ್ಯಕಾಗಿ ಸರ್ಕಾರ ಹಲವು ಉತ್ತೇಜನ ಕ್ರಮಗಳನ್ನು ಕೈಗೊಂಡಿದೆ. ಆ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ 120 ಕೋಟಿ ರೂ ಬಿಡುಗಡೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳುವ ಅವಕಾಶವಿದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆಯುವತ್ತ ಗಮನಹರಿಸಬೇಕು. ಕ್ರೀಡಾಕ್ಷೇತ್ರದ ಮೂಲ ಸೌಲಭ್ಯಕ್ಕೆ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಮೋದ್ ಮಧ್ವರಾಜ್ ಅವರು ಹೇಳಿದರು. ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಕೇಂದ್ರದ ಅಭಿವೃದ್ಧಿಗೆ ಪ್ರಸ್ತುತ ಸರ್ಕಾರ 1 ಕೋಟಿ ರೂ ನೀಡಿದೆ. ಕ್ರೀಡಾಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಸಚಿವರು ವಿವರಿಸಿದರು.

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ರೀಡಾಪಟುಗಳಿಗೆ ಬೇಕಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದರು.  ಜಿಲ್ಲೆಯಲ್ಲಿ ಈಗಾಗಲೇ ಮಡಿಕೇರಿ, ಪೊನ್ನಂಪೇಟೆ ಮತ್ತು ಸೋಮವಾರಪೇಟೆಗಳಲ್ಲಿ ಸಿಂಥೆಟಿಕ್ ಆಸ್ಟ್ರೋಟಫರ್ ಮೈದಾನಗಳು ಇದ್ದು, ಜಿಲ್ಲೆಯ ಇನ್ನು ಕೆಲವು ಕಡೆಗಳಲ್ಲಿ ಸಿಂಥೆಟಿಕ್ ಕ್ರೀಡಾಂಗಣ ನಿರ್ಮಿಸಬೇಕಿದೆ. ಅದಕ್ಕಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದರು. ಅಶ್ವಿನಿ ಸ್ಪೋಟ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಸೆಂಟರ್ನ ಅಶ್ವಿನಿ ನಾಚಪ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಕೆ.ಜಿ.ಬೋಪಯ್ಯ, ಅಶ್ವಿನಿ ಸ್ಪೋಟ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಸೆಂಟರ್ನ ಅಶ್ವಿನಿ ನಾಚಪ್ಪ ಇತರರು ಇದ್ದರು.         


  

More Images