ದಲಿತ ಯುವಕನ ಬೆತ್ತಲೆ ಮೆರವಣಿಗೆ: ಆರು ಜನರ ಬಂಧನ

ದಲಿತ ಯುವಕನ ಬೆತ್ತಲೆ ಮೆರವಣಿಗೆ: ಆರು ಜನರ ಬಂಧನ

LK   ¦    Jun 12, 2019 06:08:29 PM (IST)
ದಲಿತ ಯುವಕನ ಬೆತ್ತಲೆ ಮೆರವಣಿಗೆ: ಆರು ಜನರ ಬಂಧನ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಬಳಿಯಿರುವ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದ ಬಳಿ ದಲಿತ ಯುವಕನ ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸರು ಇದುವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಹಳ್ಳಿ ಗ್ರಾಮದ ದಲಿತ ಯುವಕ ಪ್ರತಾಪ್ ಎಂಬಾತ ಕಳೆದ ಜೂ.3ರ ಸೋಮವಾರ ಗುಂಡ್ಲುಪೇಟೆ ಸಮೀಪದ ವೀರನಪುರ ಕ್ರಾಸ್ ಬಳಿಯಿರುವ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದ ಬಳಿ ಕೃತ್ಯ ನಡೆದಿತ್ತು. ಇಡೀ ಪ್ರರಕಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿ ಎಫ್‍ಐಆರ್ ದಾಖಲಾಗಿದೆ.

ಜೂನ್ 3 ರಂದು ಬೆಳಗ್ಗೆ 6ರ ಸಮಯದಲ್ಲಿ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದೊಳಗೆ ಆಂಜನೇಯ ಮೂರ್ತಿಯನ್ನು ಧ್ವಂಸವಾಗಿದ್ದು, ಶನೇಶ್ವರ ದೇವಾಲಯದಲ್ಲಿ ಅಶುಚಿತ್ವದಿಂದ ಕಂಡ ದೇವಾಲಯದ ಅರ್ಚಕ ಶಿವಪ್ಪ ಗಾಬರಿಗೊಳ್ಳುತ್ತಿದ್ದಂತೆ ಅಲ್ಲೇ ಇದ್ದ ಪ್ರತಾಪ್ ಈ ಕೃತ್ಯ ಮಾಡಿದ್ದಾನೆ ಎಂದು ಗಂಭೀರವಾಗಿ ಆರೋಪಿಸುತ್ತಿದ್ದಂತೆ ಗ್ರಾಮಸ್ಥರು ಸೇರಿ ಆತನನ್ನು ಹಿಡಿದು, ಬಟ್ಟೆ ಕಳಚಿ ಬೆತ್ತಲು ಮಾಡಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮಸ್ಥರು ನೀಡಿದ್ದ ದೂರಿನನ್ವಯ ಪೊಲೀಸರು ಪ್ರತಾಪ್‍ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ, ಆತ ಮಾನಸಿಕ ಅಸ್ವಸ್ಥನೆಂದು ಖಾತ್ರಿ ಪಡಿಸಿಕೊಂಡು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರು.

ಈ ಘಟನೆ ನಡೆದು ವಾರದ ಬಳಿಕ ದಲಿತ ಸಂಘಟನೆಗಳು ಪ್ರತಾಪ್‍ನನ್ನು ಕೆಬ್ಬೆಕಟ್ಟೆ ಬಳಿ ಗ್ರಾಮಸ್ಥರು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಲ್ಲದೆ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರಿನಲ್ಲಿ ಪ್ರತಿಭಟನೆ ಮಾಡಿ, ಬೆತ್ತಲೆ ಮೆರವಣಿಗೆಯ ವೀಡಿಯೋ ಬಿಡುಗಡೆ ಮಾಡಿದರು. ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು.

ಮೂಲಗಳು ಹೇಳುವಂತೆ ಪ್ರತಾಪ್ ಜೂನ್ 2 ರಂದು ಐಎಎಸ್ ಪರೀಕ್ಷೆಯನ್ನು ಬರೆಯಲು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ತಡವಾಗಿ ಹೋದ ಕಾರಣ ಪರೀಕ್ಷೆ ವಂಚಿತನಾಗಿದ್ದನು. ಇದೇ ಬೇಸರದಿಂದ ಮೈಸೂರಿನಲ್ಲಿ ಕಾಲ ಕಳೆದು ವಾಪಸ್ಸು ಗುಂಡ್ಲುಪೇಟೆ ಕಡೆಗೆ ತನ್ನ ಬೈಕಿನಲ್ಲಿ ಬಂದು ಮಲಗಿದ್ದನು. ಮರುದಿನ ಜೂನ್ 3 ರಂದು ಆಶ್ರಯಕ್ಕಾಗಿ ವೀರನಪುರ ಗೇಟ್ ಹತ್ತಿರವಿರುವ ಶನಿಮಹಾತ್ಮ (ಕೆಬ್ಬೆಕಟ್ಟೆ ಹತ್ತಿರ) ದೇವಸ್ಥಾನಕ್ಕೆದ ಬಳಿ ಬೆತ್ತಲೆ ಮೆರವಣಿಗೆ ಹಲ್ಲೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಪ್ರಗತಿ ಪರ ಸಂಘಟನೆಗಳು ದಲಿತ ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಈಗಾಗಲೇ ದಲಿತ ಯುವಕನ ಬೆತ್ತಲೆ ಮೆರವಣಿಗೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸರು ಇದುವರೆಗೂ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.