ಅಯೋಧ್ಯೆ ವಿವಾದ: ಮಡಿಕೇರಿಯಲ್ಲಿ ವಿಜಯೋತ್ಸವವು ಇಲ್ಲ, ಕರಾಳದಿನವೂ ಇಲ್ಲ

ಅಯೋಧ್ಯೆ ವಿವಾದ: ಮಡಿಕೇರಿಯಲ್ಲಿ ವಿಜಯೋತ್ಸವವು ಇಲ್ಲ, ಕರಾಳದಿನವೂ ಇಲ್ಲ

CI   ¦    Dec 06, 2018 08:08:47 PM (IST)
ಅಯೋಧ್ಯೆ ವಿವಾದ: ಮಡಿಕೇರಿಯಲ್ಲಿ ವಿಜಯೋತ್ಸವವು ಇಲ್ಲ, ಕರಾಳದಿನವೂ ಇಲ್ಲ

ಮಡಿಕೇರಿ: ಬಾಬರಿ ಮಸೀದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ನಗರದಲ್ಲಿ ನಡೆಸಲು ಉದ್ದೇಶಿಸಿದ್ದ ವಿಜಯೋತ್ಸವಕ್ಕೆ ಪೊಲೀಸ್ ಸರ್ಪಗಾವಲು ತಣ್ಣೀರೆರಚಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ವಿಶೇಷ ಪೂಜೆ ಮತ್ತು ಭಜನೆಗಳಿಗಷ್ಟೆ ಸೀಮಿತವಾಯಿತು.

ವಿಶ್ವ ಹಿಂದೂ ಪರಿಷತ್, ಬಜರಂಗದಳವನ್ನು ಒಳಗೊಂಡಂತೆ ವಿವಿಧ ಹಿಂದೂ ಪರ ಸಂಘಟನೆಗಳು ಗುರುವಾರ ನಗರದ ಕಾಲೇಜು ರಸ್ತೆಯ ಪೇಟೆ ಶ್ರೀ ರಾಮಮಂದಿರದಲ್ಲಿ ಬೆಳಗ್ಗೆ ಸಮಾವೇಶಗೊಂಡು ಶ್ರೀರಾಮನ ಭಜನೆ ಸೇರಿದಂತೆ ವಿಶೇಷ ಪೂಜೆಗಳನ್ನು ನಡೆಸಿದರು. ಯಾವುದೇ ಮೆರವಣಿಗೆ, ಪಟಾಕಿಗಳನ್ನು ಸಿಡಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಅನ್ವಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪಟಾಕಿ ಸಿಡಿಸಿದರಂತೆ
ಇದೇ ಹಂತದಲ್ಲಿ ನಗರದ ಕೋಟೆಯ ಹೊರ ಭಾಗದಲ್ಲಿ ಕೆಲವರು ಪಟಾಕಿಗಳನ್ನು ಸಿಡಿಸಿದರೆಂದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದರಾದರು, ಅಷ್ಟರಲ್ಲೇ ಪಟಾಕಿ ಸಿಡಿಸಿದವರು ಸ್ಥಳದಿಂದ ತೆರಳಿದ್ದರು.

ಎಸ್‍ಡಿಪಿಐ ಯತ್ನ ವಿಫಲ
ಪಟಾಕಿ ಸಿಡಿಸಿದರೆನ್ನುವ ಕಾರಣಕ್ಕೆ ಎಸ್‍ಡಿಪಿಐ ಕಾರ್ಯಕರ್ತರು, ವಿಜಯೋತ್ಸವಕ್ಕೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿ, ಇಂದಿರಾ ಗಾಂಧಿ ವೃತ್ತದ ಬಳಿಗೆ ಆಗಮಿಸಲು ಯತ್ನಿಸಿದರು. ಈ ಹಂತದಲ್ಲಿ ಪೊಲೀಸರು ಅವರನ್ನು ತಡೆದು, ವಾಪಸ್ ಕಳುಹಿಸಿ ವಾತಾವರಣವನ್ನು ತಿಳಿಗೊಳಿಸಿದರು.

ಡಿವೈಎಸ್‍ಪಿ ಸುಂದರರಾಜ್, ವೃತ್ತ ನಿರೀಕ್ಷಕರುಗಳಾದ ಐ.ಪಿ.ಮೇದಪ್ಪ, ಅನೂಪ್ ಮಾದಪ್ಪ, ಭರತ್ ಸೇರಿದಂತೆ ಡಿಎಆರ್, ಕೆಎಸ್‍ಆರ್‍ ಪಿ ಪೊಲೀಸರು ಖುದ್ದು ಸ್ಥಳದಲ್ಲಿದ್ದು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.

ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮದಲ್ಲಿ ವಿಹಿಂಪ ಪ್ರಮುಖರಾದ ಡಿ. ನರಸಿಂಹ, ಬಜರಂಗದಳದ ಕುಕ್ಕೇರ ಅಜಿತ್, ಚೇತನ್, ವಿವಿಧ ಸಂಘಟನೆಗಳ ರಾಬಿನ್ ದೇವಯ್ಯ, ಅರುಣ್ ಕುಮಾರ್, ಧನಂಜಯ್, ಜಗದೀಶ್, ವಿನಯ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ, ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

More Images