ವಿಶೇಷಚೇತನ ವ್ಯಕ್ತಿಯ ಅಂಗಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ವಿಶೇಷಚೇತನ ವ್ಯಕ್ತಿಯ ಅಂಗಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

LK   ¦    Jun 23, 2019 09:55:54 AM (IST)
ವಿಶೇಷಚೇತನ ವ್ಯಕ್ತಿಯ ಅಂಗಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಕೆ.ಆರ್.ಪೇಟೆ: ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ವಿಶೇಷಚೇತನ ವ್ಯಕ್ತಿಯ ಅಂಗಡಿಗೆ ಕಿಡಿಗೇಡಿಗಳು ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಅಂಗಡಿಯೊಳಗಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಕೂಲಡಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಕೂಡಲಕುಪ್ಪೆ ಗ್ರಾಮದ ಅಂಗವಿಕಲ ಮಹದೇವ್ ಅವರು ಕಳೆದ ಐದಾರು ವರ್ಷಗಳ ಹಿಂದೆ ಬೈಕ್ ಅಪÀಘಾತದಲ್ಲಿ ಕಾಲು ಮುರಿದು ಅಂಗವಿಕಲರಾಗಿದ್ದರು. ಜೀವನಕ್ಕಾಗಿ ತಮ್ಮ ಮನೆಯ ಬಳಿ ಸಣ್ಣ ಪೆಟ್ಟಿಗೆ ಅಂಗಡಿಯನ್ನಿಟ್ಟುಕೊಂಡು ಪತ್ನಿ, ಇಬ್ಬರು ಮಕ್ಕಳು, ಇಬ್ಬರು ವೃದ್ದ ತಂದೆ-ತಾಯಿಯನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದರು. ಈ ಅಂಗಡಿಯಲ್ಲಿ ಸಾವಿರಾರು ರೂ. ಸಾಲ ಮಾಡಿದ್ದ ಕಿಡಿಗೇಡಿಗಳು ಮತ್ತೆ ಸಾಲ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಇದಕ್ಕೆ ಮಹಾದೇವ್ ಅವರು ನಾನು ಸಾಲ ಮಾಡಿ ಬಂಡವಾಳ ಹಾಕಿದ್ದೇನೆ ಹಾಗಾಗಿ ನೀವು ನನಗೆ ಕೊಡಬೇಕಾದ ಅಂಗಡಿಯ ಹಳೆಯ ಸಾಲವನ್ನು ಕೊಟ್ಟು ಹೊಸ ಸಾಲ ಪಡೆದುಕೊಳ್ಳಿ ಎಂದು ಖಡಕ್ ಉತ್ತರ ಹೇಳಿದ್ದರು.

ಇದರಿಂದ ಕುಪಿತಗೊಂಡ ಕಿಡಿಗೇಡಿಗಳು ನಿಮ್ಮ ಅಂಗಡಿಯನ್ನು ಸುಟ್ಟು ಹಾಕುತ್ತೇವೆ ಎಂದು ಗ್ರಾಮದಲ್ಲಿ ಹೇಳಿಕೊಂಡು ತಿರುಗುತ್ತಿದ್ದರು. ಏನೋ ಬೆದರಿಸಲು ಈ ರೀತಿ ಹೇಳುತ್ತಿರಬಹುದು ಎಂದು ಅಂಗಡಿಯ ಮಾಲೀಕ ಮಹಾದೇವ್ ಸುಮ್ಮನಾಗಿದ್ದರು. ಆದರೆ ಕಿಡಿಗೇಡಿಗಳು ಶುಕ್ರವಾರ ಮಧ್ಯರಾತ್ರಿ ಅಂಗಡಿಯೊಳಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಇದರಿಂದ ಅಂಗಡಿಯೊಳಗಿದ್ದ ಬೀಡಿ-ಸಿಗರೇಟ್, ಬಿಸ್ಕೆಟ್ ಪಾಕೆಟ್‍ಗಳು, ಎಲೆ ಅಡಿಕೆ, ದಿನಸಿ ಸಾಮಗ್ರಿಗಳು ಸೇರಿದಂತೆ ಸುಮಾರು 2ಲಕ್ಷ ಬೆಲೆ ಬಾಳುವ ವಸ್ತುಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಕಿಡಿಗೇಡಿಗಳು ಘಟನೆ ನಡೆದ ನಂತರ ಗ್ರಾಮದಿಂದ ನಾಪತ್ತೆಯಾಗಿದ್ದಾರೆ ಹಾಗಾಗಿ ನನಗೆ ನ್ಯಾಯ ಕೊಡಿಸಬೇಕು. ಮುಂದೆ ಹೀಗಾಗದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಂಗಡಿಯ ಮಾಲೀಕರಾದ ಮಹಾದೇವ್ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್‍ಪೆಕ್ಟರ್ ಆನಂದೇಗೌಡ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಕೃತ್ಯ ನಡೆಸಿ ಗ್ರಾಮದಿಂದ ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.