ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಕ್ಕೆ ಭಾರೀ ವಿರೋಧ

ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಕ್ಕೆ ಭಾರೀ ವಿರೋಧ

SK   ¦    Jan 11, 2019 07:39:09 PM (IST)
ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಕ್ಕೆ ಭಾರೀ ವಿರೋಧ

ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಕತ್ತು ಹಿಸುಕುವ ಪ್ರಯತ್ನ ಮತ್ತೆ ನಡೆಯುತ್ತಿದೆ. ಕನ್ನಡಿಗರ ಸ೦ವಿಧಾನಿಕ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ಮಂಗಲ್ಪಾಡಿ ಸರಕಾರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕರ ನೇಮಕ ಮಾಡಿ ಸುದ್ದಿಯಾಗಿತ್ತು. ಕನ್ನಡಿಗರ ಹೋರಾಟದ ಫಲವಾಗಿ ಮಲಯಾಳ ಶಿಕ್ಷಕನನ್ನು ತೆರವುಗೊಳಿಸಲಾಗಿತ್ತು.

ಇದೀಗ ಮತ್ತೆ ಮೂರು ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳ ಶಿಕ್ಷರನ್ನು ನೇಮಿಸಿದೆ. ಪೈವಳಿಕೆ ಸಮೀಪದ ಕಾಯರ್ ಕಟ್ಟೆ, ಪೆರಡಾಲ ಮತ್ತು ಬೇಕೂರು ಸರಕಾರಿ ಶಾಲೆಯ ಹೈಸ್ಕೂಲ್ ವಿಜ್ಞಾನ ಪಾಠಕ್ಕೆ ತಿರುವನಂತಪುರ ಮೂಲದ ಮಲಯಾಳ ಶಿಕ್ಷಕರನ್ನು ನೇಮಿಸಿರುವುದು ಕನ್ನಡ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಶುಕ್ರವಾರ ಶಾಲೆಗೆ ಸೇರ್ಪಡೆಗೊಳ್ಳಲು ತಲಪಿದ ಮಲಯಾಳ ಶಿಕ್ಷಕರನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ತಡೆದು ಪ್ರತಿಭಟನೆ ನಡೆಸಿದ್ದು, ಇದರಿಂದ ಶಿಕ್ಷಕರಿಗೆ ಶಾಲಾ ಅವರಣದೊಳಗೆ ಬರಲು ಸಾಧ್ಯವಾಗಿಲ್ಲ. ಬೆಳಗ್ಗೆ ಕಾಯರ್ ಕಟ್ಟೆ ಶಾಲೆಗೆ ತಲುಪಿದ ಶಿಕ್ಷಕ ಹಾಗೂ ಮಧ್ಯಾಹ್ನ ಬೇಕೂರು ಶಾಲೆಗೆ ತಲುಪಿದ ಶಿಕ್ಷಕಿಯನ್ನು ಅವರಣದೊಳಗೆ ಪ್ರವೇಶಿಸಲು ಪ್ರತಿಭಟನಾಕಾರರು ಅವಕಾಶ ನೀಡದೆ ಮರಳುವಂತಾಯಿತು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ, ಫರೀದಾ ಝಕೀರ್ ಪ್ರತಿಭಟನಾ ಕನ್ನಡಿಗ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಸ್ಥಳಕ್ಕೆ ಆಗಮಿಸಿದ್ದರು.

ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ಕನ್ನಡ ವಿದ್ಯಾರ್ಥಿಗಳು ಮತ್ತು ಶಾಲಾ ರಕ್ಷಕ ಶಿಕ್ಷಕ ಸಂಘ ತೀರ್ಮಾನಿಸಿದೆ.

ಭಾಷಾ ಅಲ್ಪಸಂಖ್ಯಾತ ಪ್ರದೇಶದ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆ ಹೇರಿಕೆಗೆ ಹುನ್ನಾರ ನಡೆಯುತ್ತಿದ್ದು, ಹಂತ ಹಂತವಾಗಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಭಾಷೆ ಬಲ್ಲ ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗುತ್ತಿದ್ದು, ಇದರಿಂದ ಕನ್ನಡ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.

ಕಯ್ಯಾರ ಕಿಞ್ಞಣ್ಣ ರೈ ಪ್ರಾಥಮಿಕ ಶಿಕ್ಷಣ ಪಡೆದ ಪೆರಡಾಲ ಸರಕಾರಿ ಶಾಲೆಗೂ ಕನ್ನಡ ತರಗತಿಗೆ ಮಲಯಾಳ ಶಿಕ್ಷಕರನ್ನು ನೇಮಕ ಮಾಡಲಾಗಿದೆ.

ಬೇಕೂರು ಸರಕಾರಿ ಹೈಸ್ಕೂಲಿಗೂ ವಿಜ್ಞಾನ ವಿಭಾಗಕ್ಕೆ ಮಲೆಯಾಳ ಶಿಕ್ಷಕನನ್ನು ನೇಮಕಗೊಳಿಸಿದ್ದು, 200ಕ್ಕಿಂತಲೂ ಮೇಲ್ಪಟ್ಟು ಕನ್ನಡ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ.

ಪೈವಳಿಕೆ ಕಾಯರ್ ಕಟ್ಟೆ ಸರಕಾರಿ ಹೈಸ್ಕೂಳಿಗೂ ವಿಜ್ಞಾನ ಶಿಕ್ಷಕರಾಗಿ ಮಲಯಾಳ ಮಾತ್ರ ಬಲ್ಲವರನ್ನು ನೇಮಿಸಲಾಗಿದೆ. ಮಾಧ್ಯಮದಲ್ಲಿ ಬೋಧಿಸಲು ನೇಮಕಗೊಳಿಸಿರುವುದು ಆಶ್ಚರ್ಯ-ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ಗಡಿನಾಡಿನ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಏನೆಂಬುದು ಚಿಂತಿಸುವ ಕಾಲ ಬಂದಿದೆ.

More Images