ರಾಷ್ಟ್ರಮಟ್ಟಕ್ಕೆ ಕೊಡಗಿನ `ಮದ್ದುಸೊಪ್ಪು' ಪ್ರಬಂಧ ಆಯ್ಕೆ

ರಾಷ್ಟ್ರಮಟ್ಟಕ್ಕೆ ಕೊಡಗಿನ `ಮದ್ದುಸೊಪ್ಪು' ಪ್ರಬಂಧ ಆಯ್ಕೆ

LK   ¦    Dec 07, 2017 03:47:30 PM (IST)
ರಾಷ್ಟ್ರಮಟ್ಟಕ್ಕೆ ಕೊಡಗಿನ `ಮದ್ದುಸೊಪ್ಪು' ಪ್ರಬಂಧ ಆಯ್ಕೆ

ಮಡಿಕೇರಿ: ಕೊಡಗಿನ ಮಂದಿ ಮಳೆಗಾಲದಲ್ಲಿ ಕಕ್ಕಡ 18(ಆಗಸ್ಟ್ 3)ರಂದು ಸೇವಿಸುವ ಸಾಂಪ್ರದಾಯಿಕ ಮದ್ದುಸೊಪ್ಪು(ಆಟಿಸೊಪ್ಪು) ಕುರಿತ ವೈಜ್ಞಾನಿಕ ಪ್ರಬಂಧ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವೇಷಣೆಗಳ ಬಳಕೆ ಎಂಬ ಕೇಂದ್ರ ವಿಷಯದಡಿ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯಮಟ್ಟದ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕಿರಿಯ ವಿಜ್ಞಾನಿ ಪಿ.ಎ.ನಂಜಪ್ಪ ಮದ್ದುಸೊಪ್ಪು ಕುರಿತು ಪ್ರಬಂಧವನ್ನು ಮಂಡಿಸಿದ್ದರು.

ರಾಜ್ಯಮಟ್ಟದ ಸಮಾವೇಶದಿಂದ ರಾಷ್ಟ್ರೀಯ ಮಕ್ಕಳ ಸಮಾವೇಶಕ್ಕೆ 30 ತಂಡಗಳಲ್ಲಿ ಕೊಡಗಿನಿಂದ ನಗರ ಪ್ರದೇಶದ ಕಿರಿಯ ವಿಭಾಗದಿಂದ ಪಿ.ಎ.ನಂಜಪ್ಪ ತಂಡ ಆಯ್ಕೆಯಾಗಿದೆ. ರಾಷ್ಟ್ರೀಯ ಸಮಾವೇಶವು ಡಿ.27 ರಿಂದ 31 ವರೆಗೆ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಡೆಯಲಿದೆ.

ಶಾಲೆಯ ಮಾರ್ಗದರ್ಶಿ ಶಿಕ್ಷಕಿ ಪಿ.ಎಲ್. ಚೈತ್ರಕಲಾ ಅವರ ಮಾರ್ಗದರ್ಶನದಲ್ಲಿ ತಂಡದ ನಾಯಕ ಪಿ.ಎ. ನಂಜಪ್ಪ ತಮ್ಮ ಶಾಲೆಯ ತಂಡದ ಸದಸ್ಯರಾದ ತೃಶಾ ಅಪ್ಪಣ್ಣ, ಸುನೈನಾ ಮುತ್ತಣ್ಣ, ಬಿ.ವಿ.ತ್ರೇಯಾ, ಎಸ್.ತನೀಶ್ ಅವರ ಸಹಕಾರದೊಂದಿಗೆ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಎಂಬ ಶೀರ್ಷಿಕೆಯಡಿ ಉತ್ತಮ ಔಷಧೀಯ ಗುಣವುಳ್ಳ ಮದ್ದು ಸೊಪ್ಪು (ಆಟಿ ಸೊಪ್ಪು) ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ತಾವು ನಡೆಸಿದ ಸಮೀಕ್ಷೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕೈಗೊಂಡ ಪರಿಹಾರ ಕ್ರಮಗಳು ಹಾಗೂ ತೀರ್ಮಾನದಿಂದ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧ ಇದಾಗಿದೆ.

ಪಿ.ಎ. ನಂಜಪ್ಪ ಮಡಿಕೇರಿ ನಗರದ ಕಾಫಿ ಬೆಳೆಗಾರ ಪಾಂಡಂಡ ಅಪ್ಪಣ ಸುಬ್ಬಯ್ಯ ಮತ್ತು ಯಶಿಕ ಅಪ್ಪಣ್ಣ ದಂಪತಿಯ ಪುತ್ರನಾಗಿದ್ದಾನೆ