ನೆರೆ ಹಾವಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 418.26 ಕೋಟಿ ಹಾನಿ

ನೆರೆ ಹಾವಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 418.26 ಕೋಟಿ ಹಾನಿ

SB   ¦    Aug 13, 2019 06:04:29 PM (IST)
ನೆರೆ ಹಾವಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 418.26 ಕೋಟಿ ಹಾನಿ

ಕಾರವಾರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಪ್ರಾಥಮಿಕ ವರದಿ ಪ್ರಕಾರ ಅಂದಾಜು 418.26 ಕೋಟಿ ರೂ. ಹಾನಿಯಾಗಿದ್ದು, ಪರಿಹಾರ ಕಾರ್ಯವನ್ನು ಅತೀ ಶೀಘ್ರದಲ್ಲಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿ ಇದುರೆಗೆ 3257 ಮನೆಗಳು ಬಿದ್ದ ಬಗ್ಗೆ ವರದಿಯಾಗಿದೆ. ಆಯಾ ಮನೆಗಳ ಮಾಲಿಕರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಮಾತನಾಡಿ, ಮುಂದಿನ 48 ಗಂಟೆಗಳಲ್ಲಿ ವಿದ್ಯುತ್, ರಸ್ತೆ, ದೂರವಾಣಿ ನೆಟ್‌ವರ್ಕ ಹೀಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಚಿಗಳ್ಳಿ ಡ್ಯಾಮ್‌ ಬಿರುಕು ಬಿಟ್ಟಿದ್ದರಿಂದಾಗಿ ಹೆಚ್ಚು ಕೃಷಿ ಭೂಮಿ ಹಾನಿಗೊಳಗಾಗಿದೆ. ರಸ್ತೆ ಸಂಪರ್ಕಕ್ಕೆಆಧ್ಯತೆಕೊಟ್ಟು ಸರಿಪಡಿಸಿಕೊಂಡು ಆಗಸ್ಟ್ 16ರ ನಂತರ ಬೆಳೆ ಸಮೀಕ್ಷೆ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಸ್ವಚ್ಛತೆ, ಆರೋಗ್ಯ, ಕುಡಿಯುವ ನೀರಿನಕಡೆ ಹೆಚ್ಚು ಗಮನ ಹರಿಸಲಾಗುವುದು ಎಂದರು.

ಜಿಪಂ ಸಿಇಓ ಎಂ. ರೋಷನ್ ಮಾತನಾಡಿ, 14ನೇ ಹಣಕಾಸು ಯೋಜನೆಯಡಿ ಇರುವ ಹಣವನ್ನು, ಗ್ರಾಮ ಪಂಚಾಯತ್ ಮಟ್ಟದ ರಸ್ತೆ ಅಭಿವೃದ್ಧಿ, ಚರಂಡಿ ವ್ಯವಸ್ಥೆ ಹೀಗೆ ಮುಂತಾದ ಕಾರ್ಯಗಳಿಗಾಗಿ ವಿನಿಯೋಗಿಸಲಾಗುವುದು. ಈ ಕುರಿತಾಗಿ ಗ್ರಾಮ ಪಂಚಾಯತ್‌ಗಳಲ್ಲಿ ತುರ್ತು ಸಭೆಯನ್ನು ಕೈಗೊಳ್ಳುವಂತೇ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಅನಾರೋಗ್ಯದಿಂದ ಬಳಲುತ್ತಿರುವ ನೆರೆಪೀಡಿತ 29,216 ಜನರಿಗೆ ಔಷಧಿಗಳನ್ನು ಒದಗಿಸಿದ್ದೇವೆ. ಕುಡಿಯುವ ನೀರಿನ ಸೌಲಭ್ಯತಲೆದೋರುತ್ತಿದ್ದು, ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಸಂತ್ರಸ್ತರ ಕ್ಷೇಮಾಭಿವೃದ್ಧಿ ಹಾಗೂ ಅವರಿಗೆ ಸಾಂತ್ವಾನ ಹೇಳಲು ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಸದಸ್ಯರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಮಾತನಾಡಿ, ನೆರೆ ಹಾವಳಿಯಿಂದ ಸಿಲುಕಿಹಾಕಿಕೊಂಡ ಜನರನ್ನು ನೌಕಾನೆಲೆಯ ರಕ್ಷಣಾ ತಂಡ, ಕರಾವಳಿ ಭದ್ರತಾ ಪಡೆ, ಅಗ್ನಿಶಾಮಕ ತಂಡ, ಜಿಲ್ಲಾ ಕಡಲತೀರ ಪ್ರದೇಶಾಭಿವೃಧ್ಧಿ ಸಮಿತಿಯ ದೋಣಿಗಳು ಹಾಗೂ ಮೀನುಗಾರರ ದೋಣಿಗಳು ನೆರೆ ಸಂತ್ರಸ್ತರ ರಕ್ಷಣೆ ಮಾಡುವಲ್ಲಿ ಸಹಕರಿಸಿವೆ. ಯಾರಿಗೂ ಜೀವ ಹಾನಿಯಾಗಬಾರದೆನ್ನುವುದು ನಮ್ಮ ಗುರಿಯಾಗಿತ್ತು. ಅದರಂತೆ ಸಾಧ್ಯವಾದಷ್ಟು ಮಟ್ಟಿಗೆ ಯಶಸ್ಸು ಕೂಡಾ ಆಗಿರುತ್ತದೆ. ಮುಳಗಡೆಯಾದ 113 ಗ್ರಾಮಗಳ 6200 ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿರುತ್ತದೆ ಎಂದರು.