ಬಂಡೀಪುರದಲ್ಲಿ ಗಾಯಗೊಂಡಿದ್ದ ಗಂಡು ಹುಲಿ ಸಾವು

ಬಂಡೀಪುರದಲ್ಲಿ ಗಾಯಗೊಂಡಿದ್ದ ಗಂಡು ಹುಲಿ ಸಾವು

LK   ¦    Jul 11, 2019 07:16:23 PM (IST)
ಬಂಡೀಪುರದಲ್ಲಿ ಗಾಯಗೊಂಡಿದ್ದ ಗಂಡು ಹುಲಿ ಸಾವು

ಚಾಮರಾಜನಗರ: ತೀವ್ರ ಗಾಯಗೊಂಡು, ನಿತ್ರಾಣಗೊಂಡಿದ್ದ ಗಂಡು ಹುಲಿಯೊಂದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮದ್ದೂರು ಬೀಟ್‍ನ ಹೊಂಗಹಳ್ಳಿ ಸಮೀಪದ ನಿಂಗಹಳ್ಳಿ ಕಾರೇಮಾಳದಲ್ಲಿ ಎಂಟು ವರ್ಷದ ಗಂಡು ಹುಲಿ ಸಾವನ್ನಪ್ಪಿದ್ದು, ಅದು ಕಳೆದ ಕೆಲ ದಿನಗಳ ಹಿಂದೆ ತಲೆ ಮತ್ತು ಕುತ್ತಿಗೆ ಬಳಿ ತೀವ್ರ ಗಾಯಗೊಂಡಿತ್ತು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 6ರಿಂದ ನಿತ್ಯವೂ ಕಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಂಡು ಹುಲಿ ಗುರುವಾರ ಬೆಳಗ್ಗೆ ಶವವಾಗಿ ನಿಂಗಹಳ್ಳಿ ಕಾರೇಮಾಳದ ಬಳಿ ದೊರೆತ್ತಿದ್ದು, ಬಂಡೀಪುರದ ಸಿ.ಎಫ್. ಬಾಲಚಂದ್ರ, ಎಸಿಎಫ್ ನಟರಾಜು, ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಸ್ವಯಂ ಸಂಸ್ಥೆಯ ರಘುರಾಮ್ ಅವರು ಸ್ಥಳ ಪರಿಶೀಲನೆ ನಡೆಸಿ, ಅಂತ್ಯ ಸಂಸ್ಕಾರ ನಡೆಸಿದರು.

ಕಳೆದ ಕೆಲವು ತಿಂಗಳುಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ, ಚಿರತೆ, ಆನೆಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ.