ಗ್ರಾಮ ವಾಸ್ತವ್ಯ ಕಲ್ಪನೇ ನೀಡಿದ್ದೇ ನಾಲ್ವಡಿ ಕೃಷ್ಣರಾಜ್ ಒಡೆಯರ್: ಬನ್ನೂರು ಕೆ.ರಾಜು

ಗ್ರಾಮ ವಾಸ್ತವ್ಯ ಕಲ್ಪನೇ ನೀಡಿದ್ದೇ ನಾಲ್ವಡಿ ಕೃಷ್ಣರಾಜ್ ಒಡೆಯರ್: ಬನ್ನೂರು ಕೆ.ರಾಜು

LK   ¦    Jun 23, 2019 09:10:15 AM (IST)
ಗ್ರಾಮ ವಾಸ್ತವ್ಯ ಕಲ್ಪನೇ ನೀಡಿದ್ದೇ ನಾಲ್ವಡಿ ಕೃಷ್ಣರಾಜ್ ಒಡೆಯರ್: ಬನ್ನೂರು ಕೆ.ರಾಜು

ಮೈಸೂರು: ಆಧುನಿಕ ಕರ್ನಾಟಕದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಗ್ರಾಮ ವಾಸ್ತವ್ಯದ ಪರಿಕಲ್ಪನೆಯನ್ನು ಅಂದೇ ನೀಡಿದ್ದರು. ಸಿಎಂ ಕುಮಾರಸ್ವಾಮಿ ಹೇಳಿ ಹೋಗುತ್ತಾರೆ. ಆದರೆ ನಾಲ್ವಡಿ ಅವರು ಹೇಳದೆ ಮಾರುವೇಷದಲ್ಲಿ ಗ್ರಾಮಗಳಿಗೆ ತೆರಳುತ್ತಿದ್ದರು ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.||

ಮೈಸೂರು ಕನ್ನಡ ವೇದಿಕೆ ಮತ್ತು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದವರು. ಅನೇಕ ಮೊದಲುಗಳಿಗೆ ಅಡಿಗಲ್ಲಿಟ್ಟವರು. ದೇಶದಲ್ಲಿ ಅನೇಕ ಸಂಸ್ಥಾನಗಳು ಆಳ್ವಿಕೆ ನಡೆಸಿವೆ. ಮೈಸೂರು ಸಂಸ್ಥಾನವನ್ನು 25 ಅರಸರು ಆಳಿದ್ದಾರೆ. ಆದರೆ, ಅಭಿವೃದ್ಧಿಯಲ್ಲಿ ಸಿಂಹಪಾಲು ನಾಲ್ವಡಿಯವರಿಗೆ ಸಲ್ಲುತ್ತದೆ. ಸಂಸ್ಥಾನದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಖ್ಯಾತಿ ಅವರದ್ದು. ಅಲ್ಲದೆ ಅಂದಿನ ಕಾಲದಲ್ಲೇ ಗ್ರಾಮಗಳಿಗೆ ಮಾರುವೇಷದಲ್ಲಿ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಅವರ ಗ್ರಾಮ ವಾಸ್ತವ್ಯದ ಫಲವೇ ಕನ್ನಂಬಾಡಿ ಅಣೆಕಟ್ಟೆ ಎಂದರು.

ಇತ್ತೀಚೆಗೆ ಜೋಡೆತ್ತುಗಳ ಬಗ್ಗೆ ಹೆಚ್ಚು ಚರ್ಚಿತವಾಗುತ್ತಿದೆ. ಹಲವರು ನಾವು ಜೋಡೆತ್ತುಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಅಭಿವೃದ್ಧಿಯ ಜೋಡೆತ್ತುಗಳೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರು. ಈ ಇಬ್ಬರು ಮೈಸೂರು ಸಂಸ್ಥಾನವನ್ನೇ ಅಭಿವೃದ್ಧಿಯ ಶಿಖರಕ್ಕೇರಿಸಿದರು. ಹಳೆ ಮೈಸೂರು ಭಾಗದಲ್ಲಿ ಇವರ ಕೊಡುಗೆಗಳ ಕುರುಹು ಎಲ್ಲೆಡೆ ಇವೆ. ಅಂತಹ ಮಹಾನ್ ಸಾಧಕರು ನಾಲ್ವಡಿ-ಸರ್‍ಎಂವಿ. ಒಂದು ವೇಳೆ ಮೈಸೂರು ನಾಲ್ವಡಿಯವರ ಆಳ್ವಿಕೆಗೆ ಒಳಪಡದಿದ್ದರೆ ನಾವೆಲ್ಲರೂ ಹೀನಾಯ ಸ್ಥಿತಿಯಲ್ಲಿರುತ್ತಿದ್ದೆವು ಎಂದರು.

ನಾಲ್ವಡಿ ಅವರು ಸುದೀರ್ಘವಾಗಿ ಮೈಸೂರು ಸಂಸ್ಥಾನ ಆಳಿದರು. ಅವರ ಕಾಲದಲ್ಲಿ ಅಭಿವೃದ್ಧಿಯ ರಥ ಎಲ್ಲೆಡೆ ಚಲಿಸಿತ್ತು. ಅವರ ದೂರದರ್ಶಿತ್ವದ ಪ್ರತೀಕವಾಗಿ ವಿಶ್ವವಿದ್ಯಾಲಯ, ದೇವರಾಜ ಮಾರುಕಟ್ಟೆ, ಒಳಚರಂಡಿ ವ್ಯವಸ್ಥೆ, ರಸ್ತೆಗಳು ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ ಮಾಲ್‍ಗಳ ಪರಿಕಲ್ಪನೆಯನ್ನು ನೀಡಿದವರೇ ನಾಲ್ವಡಿಯವರು. ಅವರ ಕೊಡುಗೆಗಳಲ್ಲಿ ಒಂದಾದ ದೊಡ್ಡಗರಿಯಾರ ಬಿರುಕುಬಿಟ್ಟಿದೆ. ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ರಾಜಕಾರಣಿಗಳು ಹೆಚ್ಚಿನದೇನನ್ನೂ ಮಾಡಬೇಕಿಲ್ಲ. ನಾಲ್ವಡಿಯವರ ಕೊಡುಗೆಗಳನ್ನು ಉಳಿಸಿ, ಸಂರಕ್ಷಣೆ ಮಾಡಿದರೆ ಸಾಕು ಎಂದರು.

ಇದೇ ವೇಳೆ ಆಯುರ್ವೇದ ವೈದ್ಯೆ ಡಾ.ಆಶಾಮನು, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ರಾಜ್ಯಧರ್ಮ ಪತ್ರಿಕೆ ಉಪಸಂಪಾದಕ ಬಾಲಮುರಳಿಕೃಷ್ಣ, ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆ ಛಾಯಾಗ್ರಾಹಕ ಉದಯ್‍ಶಂಕರ್, ವಿ ಒನ್ ಚಾನೆಲ್ ಕ್ಯಾಮೆರಾಮೆನ್ ಎಲ್.ಸತೀಶ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಎಂಆರ್‍ಸಿ ಕಾರ್ಯದರ್ಶಿ ಅನಂತರಾಜೇ ಅರಸ್ ಉದ್ಘಾಟಿಸಿದರು. ನಟರಾಜ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಾ.ಶಾರದಾ, ಇತಿಹಾಸ ವಿಭಾಗದ ಮುಖ್ಯಸ್ಥೆ ತ್ರಿವೇಣಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿ ನಾಲಾಬೀದಿ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.