ಕಾನೂನಿನ ಬಗ್ಗೆ ಜ್ಞಾನ ಇಲ್ಲದಿರುವುದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣ: ಮಹಿಳಾ ಆಯೋಗ ಅಧ್ಯಕ್ಷೆ

ಕಾನೂನಿನ ಬಗ್ಗೆ ಜ್ಞಾನ ಇಲ್ಲದಿರುವುದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣ: ಮಹಿಳಾ ಆಯೋಗ ಅಧ್ಯಕ್ಷೆ

SK   ¦    Jun 12, 2019 02:31:35 PM (IST)
ಕಾನೂನಿನ ಬಗ್ಗೆ ಜ್ಞಾನ ಇಲ್ಲದಿರುವುದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣ: ಮಹಿಳಾ ಆಯೋಗ ಅಧ್ಯಕ್ಷೆ

ಕಾಸರಗೋಡು: ಕಾನೂನಿನ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವುದು, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಧಾನ ಕಾರಣವಾಗುತ್ತಿದೆ ಎಂದು ರಾಜ್ಯ ಮಹಿಳ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೈನ್ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆಯೋಗದ ಮೆಗಾ ಅದಾಲತ್ ನ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಟ್ಟೆ ಬದಲಿಸಿದಂತೆ ಪತ್ನಿಯರನ್ನು ಬದಲಿಸುವ ಮನೋಧರ್ಮ ಕೆಲವು ಕಡೆ ಕಂಡುಬರುತ್ತಿದೆ. ಇದು ಕಾನೂನಿನ ಬಗೆಗಿನ ಅಜ್ಞಾನದ ಫಲ. ವಿಚ್ಛೇದನೆ ನಡೆಸದೇ ಮತ್ತೊಬ್ಬರನ್ನುವಿವಾಹವಾಗಕೂಡದು ಎಂಬುದು ಕಾನೂನಿನ ಸ್ಪಷ್ಟ ಆದೇಶ ಎಂದವರು ತಿಳಿಸಿದರು.

ಅದಾಲತ್ ನಲ್ಲಿ ಪರಿಶೀಲಿಸಿದ ಪ್ರಕರಣವೊಂದರ ಬಗ್ಗೆ ಮಾತನಾಡಿದ ಅವರು 18 ವರ್ಷದಲ್ಲಿ ವಿವಾಹಿತೆಯಾದ ಮಹಿಳೆಯೊಬ್ಬರು ನಂತರ ಪತಿಯಿಂದ ಬೇರ್ಪಟ್ಟಿದ್ದು, ಕಾನೂನು ರೀತಿಯ ವಿಚ್ಚೇದನೆ ನಡೆಸದೇ ಪತಿ ಮತ್ತೊಬ್ಬ ಮಹಿಳೆಯನ್ನು ವಿವಾಹಿತರಾಗಿ, ವಿದೇಶದಲ್ಲಿ ನೆಲೆಸಿದ್ದಾರೆ. ಮೂವರು ಮಕ್ಕಳ ಸಹಿತ ತಾವು ಅನಾಥೆಯಾಗಿದ್ದು, ಜೀವನಾಂಶ ನೀಡುವಂತೆ ನ್ಯಾಯಾಲಯಕ್ಕೆ ದೂರು ಸಲಿಸಿದರು. ನ್ಯಾಯಾಲಯ ತಿಂಗಳಿಗೆ 4 ಸಾವಿರ ರೂ.ಜೀವನಾಂಶ ನೀಡುವಂತೆ ತೀರ್ಪು ನೀಡಿದ್ದು, ಅದರ ವಿರುದ್ಧ ಮಹಿಳೆ ಮಹಿಳಾ ಆಯೋಗಕ್ಕೆ ಅಹವಾಲು ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ವಿವಾಹ ವೇಳೆ ತಾಯಿ ಮನೆಯಿಂದ ನೀಡಲಾಗುವ ಬಂಗಾರದ ಆಭರಣ ಮತ್ತು ನಗದು ನಂತರ ಪತಿ ಹಾಗೂ ಮನೆಮಂದಿ ಬಳಸುವ ಕ್ರಮ ವ್ಯಾಪಕವಾಗಿ ಕಂಡುಬರುತ್ತಿದೆ. ಈ ಸೊತ್ತುಗಳ ಪೂರ್ಣ ಹಕ್ಕು ಮಹಿಳೆಯರಿಗೆ ಲಭಿಸುವಂತಾಗಬೇಕು. ಇದಕ್ಕೆ ರಾಜ್ಯ ಮಹಿಳಾ ಆಯೋಗ ಯತ್ನಿಸುತ್ತಿದೆ ಎಂದವರು ನುಡಿದರು.

ಸೈಬರ್ ಆಕ್ರಮಣಕ್ಕೆ ಮಹಿಳೆಯರು ವ್ಯಾಪಕವಾಗಿ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ ಅವರು ಸಾವಿರಾರು ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ. ದೇಶದ ಇಂದಿನ ಸೈಬರ್ ಕಾಯಿದೆ ದುರ್ಬಲವಾಗಿರುವುದು ಇದಕ್ಕೆ ಪ್ರಧಾನ ಕಾರಣ ಎಂದ ಅವರು 120 ಪೊಲೀಸ್ ಕಾಯಿದೆ ಈ ನಿಟ್ಟಿನಲ್ಲಿ ಸಾಲದು, ಹೊಸ ಸಬಲ ಕಾಯಿದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ದೂರವಾಣಿ ಮೂಲಕ ಕರೆಮಾಡಿ ಕಿರುಕುಳ ನೀಡುತ್ತಿರುವ ಸಹವರ್ತಿಯೊಬ್ಬರ ವಿರುದ್ಧ ವೈದ್ಯೆಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿದ್ದರೂ, ಅದು ದುರ್ಬಲವಾಗಿದೆ. ಈ ಬಗ್ಗೆ 350 ಕಾಯಿದೆ ಪ್ರಕಾರ ದೂರು ದಾಖಲಿಸುವಂತೆ ಆಯೋಗ ಆದೇಶಿಸಿದ್ದು, ವಿಚಾರಣೆ ನಡೆಯುತ್ತಿದೆ. ಇಂಥಾ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿದ್ದು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳೆಯರು ಈ ನಿಟ್ಟಿನಲ್ಲಿ ಅಧಿಕ ಸಂಖ್ಯೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದರು.

ಆಸ್ತಿ ತಗಾದೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಹಿಳೆಯೊಬ್ಬರೊಂದಿಗೆ ಯುವಕನೊಬ್ಬ ಅಸಭ್ಯವಾಗಿ ಮಾತನಾಡಿದ ಸಂಬಂಧ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಇಲಾಖೆಗಳಿಂದ ವರದಿ ಯಾಚಿಸಲಾಗಿದೆ ಎಂದು ಅವರು ನುಡಿದರು.

ಪ್ರಕರಣವೊಂದಕ್ಕೆ ಸಂಬಂಧಿಸಿ ತಂತಿ ಬೇಲಿಯಲ್ಲಿ ಸೋಲಾರ್ ವಿದ್ಯುತ್ ಹರಿಸಿದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವಂತೆ ಆಯೋಗ ಸಂಬಂಧಪಟ್ಟವರಿಗೆ ಆದೇಶಿಸಿದೆ. ಸೋಲಾರ್ ಇರಲಿ, ಯಾವುದೇ ರೀತಿಯ ವಿದ್ಯುತ್ ಇರಲಿ. ಅದನ್ನು ಗಂಭೀರವಾಗಿ ಪರಿಶೀಲಿಸುವಂತೆ ಆಯೋಗ ಆದೇಶಿಸಿದೆ ಎಂದರು.

ಮಕ್ಕಳ ಮೇಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ ಎಂದು ತಿಳಿಸಿದ ಅವರು ಇದರ ವಿರುದ್ಧ ಕಾನೂನು ಜಾಗೃತಿ ಮೂಡಿಸುವ ಯತ್ನ ರಾಜ್ಯ ಮಹಿಳಾ ಆಯೋಗದಿಂದ ನಡೆಸಲಾಗುತ್ತಿದೆ. ಇದರ ಅಂಗವಾಗಿ ಪೋಕ್ಸೋ ಕಾಯಿದೆ ಕುರಿತು ರಾಜ್ಯಾದ್ಯಂತ ಮಹಿಳೆಯರಿಗಾಗಿ ತರಗತಿ ನಡೆಸಲಾಗುತ್ತಿದೆ. ಇದರ ಪೂರ್ಣ ವೆಚ್ಚವನ್ನು ಆಯೋಗವೇ ವಹಿಸುತ್ತಿದೆ ಎಂದರು.