ಮಂಡ್ಯದಲ್ಲಿ ಕಚೇರಿ ತೆರೆದ ಸಂಸದೆ ಸುಮಲತಾ ಅಂಬರೀಶ್

ಮಂಡ್ಯದಲ್ಲಿ ಕಚೇರಿ ತೆರೆದ ಸಂಸದೆ ಸುಮಲತಾ ಅಂಬರೀಶ್

LK   ¦    Sep 12, 2019 08:12:42 PM (IST)
ಮಂಡ್ಯದಲ್ಲಿ ಕಚೇರಿ ತೆರೆದ ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ಕೊನೆಗೂ ಮಂಡ್ಯದಲ್ಲಿ ಕಚೇರಿ ಉದ್ಘಾಟಿಸಿರುವ ಸಂಸದೆ ಸುಮಲತಾ ಅವರು ಚುನಾವಣೆ ನಂತರ ಮಂಡ್ಯದಿಂದ ಜಾಗ ಖಾಲಿ ಮಾಡುತ್ತಾರೆ ಎಂಬ ವಿರೋಧಿಗಳ ಆರೋಪಗಳನ್ನು ಸುಳ್ಳು ಮಾಡಿ ತೋರಿಸಿದ್ದಾರೆ.

ಪತಿ ಡಾ. ಎಂ. ಹೆಚ್. ಅಂಬರೀಶ್ ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯೇ ಇವರಿಗೂ ದೊರೆತಿದ್ದು, ಇದು ನಿಜವಾಗಿಯೂ ನನ್ನ ಭಾಗ್ಯ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ  ಸುಮಲತಾ ಅಂಬರೀಶ್ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಸುಮಲತಾ ಅಂಬರೀಶ್  ಅವರ ನೂತನ ಕಚೇರಿಯ  ಉದ್ಘಾಟನೆ ನಡೆದಿದ್ದು, ಜಿಲ್ಲೆಯಲ್ಲಿರುವ ಜನ ಸಾಮಾನ್ಯರ ಸಮಸ್ಯೆಗಳು ಹಾಗೂ ತಾಲ್ಲೂಕುವಾರು ಯಾವ ಯಾವ ಕೆಲಸಗಳು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪ್ರತಿವಾರ ಈ ಕಚೇರಿಯಲ್ಲಿ ಸಭೆ ನಡೆಸಲಾಗುತ್ತದೆ. ನಾನು ಒಂದೇ ಕಡೆ ಇದ್ದರೆ ಎಲ್ಲರೂ ಇಲ್ಲಿಗೆ ಬರುತ್ತಾರೆ ಹೀಗಾಗಿ ವಾರದಲ್ಲಿ ಒಂದು ಅಥವಾ ಎರಡು ದಿನ ಮಂಡ್ಯ ಕಚೇರಿಯಲ್ಲಿದ್ದು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ಹೇಳಿದ್ದಾರೆ.

ರಾಜಕೀಯವಾಗಿ ಹಣಿಯಲು, ನನ್ನನ್ನು ತೇಜೋವಧೆ ಮಾಡಲು ಹಾಗೂ ರಾಜಕೀಯವಾಗಿ ಹಣಿಯುವ ಉದ್ದೇಶದಿಂದ ನನ್ನ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅನ್ನು ತೆರೆದಿದ್ದಾರೆ. ಇದರ ಹಿಂದೆ ಪ್ರಭಾವಿಗಳ ಹಾಗೂ ಬಲಿಷ್ಠರ ಕೈವಾಡವಿದೆ. ಈ ಸಂಬಂಧವಾಗಿ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಗಣಿಗಾರಿಕೆ ಬಗ್ಗೆ ಮಾತನಾಡಿದ ಅವರು, ಕೆಆರ್‍ಎಸ್. ಅಣೆಕಟ್ಟಿಗೆ  ಯಾವುದೇ ರೀತಿ ತೊಂದರೆಯಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿರುವುದರಿಂದ, ಅದರ ಸುರಕ್ಷತೆಗೆ ಗಮನಹರಿಸಿದ್ದೇವೆ. ಜಿಲ್ಲೆಯಲ್ಲಿರುವ ಕೆರೆ-ಕಟ್ಟೆಗಳಿಗೆ ಒಂದೇ ಬಾರಿ ನೀರು ತುಂಬಿಸಲು ಸಾಧ್ಯವಿಲ್ಲ. ಒಂದಾದ ನಂತರ ಇನ್ನೊಂದು ಕೆರೆಯನ್ನು ಭರ್ತಿ ಮಾಡಲಾಗುತ್ತದೆ. ಕೆ.ಆರ್.ಎಸ್.ನಲ್ಲಿ ಬೇಕಾದಷ್ಟು ನೀರು ಇರುವುದರಿಂದ  ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಹೇಳಿದರು.