ಶುಂಠಿ ಕೃಷಿ ನಡುವೆ ಗಾಂಜಾ ಬೆಳೆ: ಆರೋಪಿ ಬಂಧನ

ಶುಂಠಿ ಕೃಷಿ ನಡುವೆ ಗಾಂಜಾ ಬೆಳೆ: ಆರೋಪಿ ಬಂಧನ

CI   ¦    Nov 08, 2018 12:24:49 PM (IST)
ಶುಂಠಿ ಕೃಷಿ ನಡುವೆ ಗಾಂಜಾ ಬೆಳೆ: ಆರೋಪಿ ಬಂಧನ

ಮಡಿಕೇರಿ: ಮೂರ್ನಾಡು ಸಮೀಪದ ಮುತ್ತಾರ್ಮುಡಿ ಗ್ರಾಮದಲ್ಲಿ ಶುಂಠಿ ಕೃಷಿಯ ನಡುವೆ ಅಕ್ರಮವಾಗಿ ಬೆಳೆಯಲಾಗಿದ್ದ 2 ಗಾಂಜಾ ಗಿಡಗಳನ್ನು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಮುತ್ತಾರ್ಮುಡಿ ಗ್ರಾಮದ ನಿವಾಸಿ ಕೆ. ಪ್ರಸನ್ನ ಅಲಿಯಾಸ್ ವಿನು(38) ಬಂಧಿತ ಆರೋಪಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಆರೋಪಿ ಪ್ರಸನ್ನ ಶುಂಠಿ ಕೃಷಿಯ ನಡುವೆ ಗಾಂಜಾ ಬೆಳೆಸಿರುವ ಖಚಿತ ಮಾಹಿತಿ ಪಡೆದ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ದಾಳಿ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ನಡೆಯತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಮಾಹಿತಿ ಆಧರಿಸಿ ದಾಳಿ ನಡೆಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು.

ಈ ಹಿನ್ನಲೆಯಲ್ಲಿ ಜಿಲ್ಲಾ ಆಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್, ಡಿಸಿಐಬಿಯ ಸಹಾಯಕ ಉಪ ನಿರೀಕ್ಷಕ ಹಮೀದ್, ಸಿಬ್ಬಂದಿ ಯೋಗೇಶ್ ಕುಮಾರ್, ನಿರಂಜನ್, ವೆಂಕಟೇಶ್, ಅನಿಲ್ ಕುಮಾರ್, ವಸಂತ, ಕಿರಣ್, ದಿನೇಶ್, ಹಾಗೂ ಚಾಲಕರಾದ ಶಶಿಕುಮಾರ್, ಅರುಣ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟ ಅಥವ ಸೇವನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದಿದ್ದಲ್ಲಿ, ಪೊಲೀಸ್ ಬೀಟ್ ಸಿಬ್ಬಂದಿಗಳು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಅಥವಾ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿರುವ ಸಲಹಾ ಪೆಟ್ಟಿಗೆಗಳಲ್ಲಿ ದೂರು ದಾಖಲಿಸಬಹುದು. ಸಾರ್ವಜನಿಕರ ಹೆಸರುಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.