ಜಿಲ್ಲಾ ಮಟ್ಟದ ಪುಟ್ಬಾಲ್ ಲೀಗ್ ಪಂದ್ಯಾವಳಿಗೆ ಮೇ 28ರಂದು ಚಾಲನೆ

ಜಿಲ್ಲಾ ಮಟ್ಟದ ಪುಟ್ಬಾಲ್ ಲೀಗ್ ಪಂದ್ಯಾವಳಿಗೆ ಮೇ 28ರಂದು ಚಾಲನೆ

CI   ¦    May 25, 2019 04:48:55 PM (IST)
ಜಿಲ್ಲಾ ಮಟ್ಟದ ಪುಟ್ಬಾಲ್ ಲೀಗ್ ಪಂದ್ಯಾವಳಿಗೆ ಮೇ 28ರಂದು ಚಾಲನೆ

ಮಡಿಕೇರಿ: ಕೊಡಗು ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್ ವತಿಯಿಂದ 2019ನೇ ಸಾಲಿನ ಜಿಲ್ಲಾ ಮಟ್ಟದ ಪುಟ್ಬಾಲ್ ಲೀಗ್ ಪಂದ್ಯಾವಳಿ ಮೇ 28ರಿಂದ ಜೂ. 3ರವರೆಗೆ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಈ ಬಾರಿಯ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ರಾಜ್ಯ ಸಂಸ್ಥೆಗೆ ನೋಂದಾವಣೆಗೊಂಡ 16 ತಂಡಗಳು ಭಾಗವಹಿಸಲಿವೆ ಎಂದರು.

ಈ ಲೀಗ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆ, ಗೋಣಿಕೊಪ್ಪಲಿನ ಮುಳಿಯ ಜ್ಯುವೆಲರ್ಸ್, ಮಡಿಕೇರಿಯ ಮಹೇಂದ್ರ ರೆಸಾರ್ಟ್ ಹಾಗೂ ಕೊಡಗಿನ ಹಲವು ದಾನಿಗಳು ಸಹಕಾರ ನೀಡಿದ್ದಾರೆ. ಪಂದ್ಯಾವಳಿ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷನಾದ ತಾನೇ ನಿರ್ವಹಿಸಲಿರುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಪ್ರಾಯೋಜಕ ಸಂಸ್ಥೆಗಳ ಮುಖ್ಯಸ್ಥರುಗಳು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.

ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆ ಅತ್ಯಂತ ಜನಪ್ರಿಯವಾಗಿ ಬೆಳೆಯುತ್ತಿದ್ದು, ಹಾಕಿ ಮತ್ತು ಕ್ರಿಕೆಟ್ ಹಬ್ಬದಂತೆಯೇ ಫುಟ್ಬಾಲ್ ಪಂದ್ಯಾಳಿಗಳು ಕೂಡ ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿವೆ. ಈಗಾಗಲೇ 20 ಕ್ಕೂ ಹೆಚ್ಚು ಫುಟ್ಬಾಲ್ ಪಂದ್ಯಾವಳಿಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ವಿಷಾದದ ವಿಚಾರವೆಂದರೆ ಅಸೋಸಿಯೇಷನ್‍ಗೆ ಒಳಪಟ್ಟು ಪಂದ್ಯಾವಳಿಗಳನ್ನು ನಡೆಸುತ್ತಿಲ್ಲ. ಫುಟ್‍ಬಾಲ್ ಕ್ರೀಡೆಯನ್ನು ಮತ್ತಷ್ಟು ವೃತ್ತಿ ಪರವಾಗಿ ಬೆಳೆಸುವ ನಿಟ್ಟಿನಲ್ಲಿ ಅಸೋಸಿಯೇಷನ್‍ನೊಂದಿಗೆ ಕೈಜೋಡಿಸಲಿ ಎಂದು ಮೋಹನ್ ಅಯ್ಯಪ್ಪ ಮನವಿ ಮಾಡಿದರು.

ಫುಟ್ಬಾಲ್ ಅಸೋಸಿಯೇಷನ್‍ನ ಜಿಲ್ಲಾ ತಂಡ ಕೊಡಗು ಇಲೆವೆನ್ ಕಳೆದ ಬಾರಿಯ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ 3ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟದ ಸಾಧನೆ ಮಾಡುವ ಮತ್ತು ಫುಟ್ಬಾಲ್‍ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳು ನಮ್ಮ ಮುಂದಿದೆ ಎಂದು ಮೋಹನ್ ಅಯ್ಯಪ್ಪ ಹೇಳಿದರು.