ವಿಧಾನಸಭಾ ಚುನಾವಣೆ: ಎ.17ರಿಂದ ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆ: ಎ.17ರಿಂದ ನಾಮಪತ್ರ ಸಲ್ಲಿಕೆ

CI   ¦    Apr 16, 2018 06:31:11 PM (IST)
ವಿಧಾನಸಭಾ ಚುನಾವಣೆ: ಎ.17ರಿಂದ ನಾಮಪತ್ರ ಸಲ್ಲಿಕೆ

ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ 17ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ಕೊನೆಯ ದಿನವಾಗಿದೆ. ಏಪ್ರಿಲ್ 25 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದೆ. ಮೇ 12 ರಂದು ಮತದಾನ ನಡೆಯಲಿದೆ. ಮೇ 15ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಏಪ್ರಿಲ್ 17 ರಿಂದ ಏಪ್ರಿಲ್ 24 ರವರಗೆ (ಏಪ್ರಿಲ್ 18 ಮತ್ತು 22 ರಂದು ರಜೆ ದಿನ ಹೊರತುಪಡಿಸಿ) ಅಯಾಯ ದಿನದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರಗೆ ನಾಮಪತ್ರವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಡಿಕೇರಿ ಉಪ ವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಎರಡನೇ ಮಹಡಿ, ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್ ಕಚೇರಿ, ವಿರಾಜಪೇಟೆಯಲ್ಲಿ ನಾಮಪತ್ರ ಸಲ್ಲಿಸ ಬಹುದಾಗಿದೆ ಎಂದರು.

ನಾಮಪತ್ರಗಳನ್ನು ಸಲ್ಲಿಸಲು ಬೇಕಾದ ಆರ್ಹತೆಗಳು ಮತ್ತು ದಾಖಲೆಗಳ ವಿವರ ಇಂತಿದೆ: ನಾಮಪತ್ರವನ್ನು ನಮೂನೆ 2 ಬಿ ನಲ್ಲಿ ಸಲ್ಲಿಸಬೇಕು. ನಮೂನೆ 26 ರಲ್ಲಿ ಅಫಿಡವಿಟ್ (ರೂ.20 ರ ಛಾಪಾ ಕಾಗದಲ್ಲಿ) ಅಭ್ಯರ್ಥಿಯು ನಾಮಪತ್ರ ಮತ್ತು ಅಫಿದಾವಿತ್ ನಲ್ಲಿ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. ಅಫಿದಾವಿತ್ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿರಬೇಕು. ನೋಟರಿ ಪಬ್ಲಿಕ್ ರಿಂದ ದೃಢೀಕರಿಸಿರಬೇಕು ಮತ್ತು ಹೆಚ್ಚುವರಿ ಅಫಿದಾವಿತ್ (ಬೇಬಾಕಿ ಬಗ್ಗೆ) ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಗಳಿಂದ ಬೇಬಾಕಿ ದೃಢೀಕರಣ ಹಾಜರುಪಡಿಸಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ವಿಧಾನಸಭಾ ಮತದಾರರ ಪಟ್ಟಿಯ ದೃಢೀಕೃತ ಪ್ರತಿ ಸಲ್ಲಿಸಬೇಕು. ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬ ಅಭ್ಯರ್ಥಿ 4 ನಾಮಪತ್ರ ಮಾತ್ರ ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ/ರಾಜ್ಯ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು ಮತ್ತು ನೋಂದಾಯಿತ/ಪಕ್ಷೇತರವಾಗಿದ್ದಲ್ಲಿ 10 ಜನ ಸೂಚಕರು ಮತ್ತು ನೋಂದಾಯಿತ/ ಪಕ್ಷೇತರವಾಗಿದ್ದಲ್ಲಿ 10 ಜನ ಸೂಚಕರ ಸಹಿ ಮಾಡಿರಬೇಕು (ಈ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು).

ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಗಳನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ದಿನಾಂಕ 24.04.2018 ರಂದು 3 ಗಂಟೆಯೊಳಗೆ ಸಲ್ಲಿಸಬೇಕು. (ಮೂಲ ಪ್ರತಿ), ಠೇವಣಿ ಹಣ ರೂ.10 ಸಾವಿರ ರೂ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿದ್ದರೆ ರೂ.5 ಸಾವಿರ ಅಭ್ಯರ್ಥಿಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಬೇಕು. ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಸೇರಿದಂತೆ 5 ಜನರಿಗೆ ಮಾತ್ರ ಪ್ರವೇಶವಿರುತ್ತದೆ. 2 ಪಾಸ್ ಪೋರ್ಟ್ ಮತ್ತು 2 ಸ್ಟಾಂಪ್ ಸೈಜ್ ಭಾವಚಿತ್ರ. ಚುನಾವಣೆಗಾಗಿ ತೆರದಿರುವ ಬ್ಯಾಂಕ್ ಖಾತೆಯ ಹೊಸ ಪಾಸ್ ಬುಕ್ ಜೆರಾಕ್ಸ್ ಹೊಂದಿರಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.