ಇಂಗ್ಲೀಷ್ ವ್ಯಾಮೋಹದಿಂದ ಮಾತೃಭಾಷೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ: ಪ್ರೊ. ಕೃಷ್ಣೇಗೌಡ

ಇಂಗ್ಲೀಷ್ ವ್ಯಾಮೋಹದಿಂದ ಮಾತೃಭಾಷೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ: ಪ್ರೊ. ಕೃಷ್ಣೇಗೌಡ

RK   ¦    Dec 07, 2017 04:26:33 PM (IST)
ಇಂಗ್ಲೀಷ್ ವ್ಯಾಮೋಹದಿಂದ ಮಾತೃಭಾಷೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ: ಪ್ರೊ. ಕೃಷ್ಣೇಗೌಡ

ಚಿಕ್ಕಮಗಳೂರು: ಇಂಗ್ಲೀಷ್ ವ್ಯಾಮೋಹದಿಂದಾಗಿ ನಾವಿಂದು ಮಾತೃಭಾಷೆ ನಮ್ಮತನ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಹರಟೆ ಖ್ಯಾತಿಯ ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ವಿಷಾದಿಸಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪದಿಂದ ನಡೆದ ಕನ್ನಡ ರಾಜ್ಯೋತ್ಸವ-ಜನೋತ್ಸವ ಸಪ್ತಾಹ ಮತ್ತು ಕರ್ನಾಟಕ ಏಕೀಕರಣ ವಜ್ರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಂಗ್ಲ ಭಾಷೆಯ ಹಿಂದೆ ಬಿದ್ದ ನಾವುಗಳು ಮಾತೃಭಾಷೆ, ನಮ್ಮತನ, ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಭಾಷೆಯ ಸೊಗಡು ಮತ್ತು ಸಾಹಿತ್ಯವನ್ನು ಕಳೆದುಕೊಂಡಿದ್ದೇವೆ. ಇಂಗ್ಲೀಷ್ ಕಲಿಯಲು ಮುಂದಾದ ನಮ್ಮ ಮಕ್ಕಳು ಅತ್ತ ಅದನ್ನೂ ಸರಿಯಾಗಿ ಕಲಿಯದೆ ಇತ್ತ ಮಾತೃಭಾಷೆಯನ್ನೂ ಕಲಿಯದೆ ಎಡಬಿಡಂಗಿಗಳಾಗಿದ್ದಾರೆ ಎಂದರು.

ಮಾತಿಗೆ ಶಕ್ತಿ ಮತ್ತು ಸಾಹಿತ್ಯ ಬರಬೇಕಾದರೆ ಆ ಮಾತು ಮಾತೃಭಾಷೆಯಲ್ಲಿರಬೇಕು ಅದನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ಮಾತನಾಡುವುದರಿಂದ ಆ ಮಾತು ಕೃತಕವೆನಿಸುತ್ತದೆ.

ಬೇರೆ ಭಾಷಿಗರು ಕನ್ನಡದಲ್ಲಿ ಮಾತನಾಡಿದರೆ ಆ ಪದಗಳು ನಮಗೆ ಕೃತಕವೆನಿಸುತ್ತವೆ ಅದೇ ರೀತಿ ನಾವು ಬೇರೆ ಭಾಷೆ ಮಾತನಾಡಿದರೆ ಆ ಪದಗಳೂ ಸಹ ಕೃತಕವಾಗುತ್ತವೆ ಎಂದು ಹೇಳಿದರು. ಜಗತ್ತಿನ ಬಹಳ ದೊಡ್ಡಭಾಷೆ ಕನ್ನಡ, ಅದಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಅದರದೇ ಆದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಸಾಹಿತ್ಯವಿದೆ ಎಂದ ಅವರು ನಾವು ಕನ್ನಡವನ್ನು ಮರೆತರೆ ಇವೆಲ್ಲವನ್ನೂ ಕಳೆದುಕೊಂಡು ಅನಾಥರಾಗುತ್ತೇವೆ ಎಂದು ಎಚ್ಚರಿಸಿದರು.