ಒಂಟಿ ಸಲಗ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಒಂಟಿ ಸಲಗ ಸೆರೆ ಹಿಡಿದ ಅರಣ್ಯಾಧಿಕಾರಿಗಳು

CI   ¦    May 16, 2018 11:58:23 AM (IST)
ಒಂಟಿ ಸಲಗ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಮಡಿಕೇರಿ: ಜನತೆಗೆ ಭಾರೀ ತೊಂದರೆ ಕೊಡುತಿದ್ದ ಒಂಟಿ ಸಲಗವೊಂದನ್ನು ಅರಣ್ಯಾಧಿಕಾರಿಗಳು ಮಂಗಳವಾರ ಮಧ್ಯಾಹ್ನ ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ ಸಾಗಿಸಿದ್ದಾರೆ.

ಕುಶಾಲನಗರ ಬಳಿಯ ಸುಂಟಿಕೊಪ್ಪ, ಹೊರುರು, ಕಲ್ಲೂರು, 7ನೇ ಹೊಸಕೋಟೆ ಮತ್ತು ಕೊಡಗರಳ್ಳಿಯ ಗ್ರಾಮಸ್ಥರಿಗೆ ಹಲವು ತಿಂಗಳುಗಳಿಂದ ಈ ಆನೆ ಉಪಟಳ ನೀಡುತಿತ್ತು. ದಿನವೂ ಹಗಲು ರಾತ್ರಿ ಎನ್ನದೆ ಗ್ರಾಮದೊಳಗೆ ನುಗ್ಗಿ ಕಾಫಿ, ತೆಂಗು ಮತ್ತು ಬಾಳೆ ಬೆಳೆಯನ್ನೆಲ್ಲಾ ನಾಶ ಮಾಡುತ್ತಿದ್ದ ಈ ಆನೆ ಸುಂಟಿಕೊಪ್ಪ -ಕುಶಾಲನಗರ ಹೆದ್ದಾರಿಯಲ್ಲಿ ಚಲಿಸುತಿದ್ದ ವಾಹನಗಳನ್ನೂ ಕೆಲವೊಮ್ಮೆ ಅಟ್ಟಿಸಿಕೊಂಡು ಬರುತ್ತಿತ್ತು. ಇದರಿಂದ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಭಯ ಭೀತರಾಗಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಬೈಕ್ ನಲ್ಲಿ ತೆರಳುತಿದ್ದ ಇಬ್ರಾಹಿಂ(64) ಎಂಬ ಕಾಫಿ ತೋಟದ ಮೇಲ್ವಿಚಾರಕರನ್ನು ಗಾಯಗೊಳಿಸಿತ್ತು. ಆದರೆ ಸವಾರ ಅದೃಷ್ಟವತಾಶ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರು ಒಂಟಿ ಸಲಗ ದಾಳಿ ನಡೆಸುತ್ತಿರುವ ಕುರಿತು ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ರಾಜ್ಯದ ಹಿರಿಯ ಅರಣ್ಯಾಧಿಕಾರಿಗಳ ಆದೇಶದಂತೆ ಸಂಭವನೀಯ ಮಾನವ ಜೀವ ಹಾನಿ ತಪ್ಪಿಸಲು ಇದನ್ನು ಹೊರುರು ಬಳಿಯ ಲಲಿತಾದ್ರಿ ತೋಟದಲ್ಲಿ ಸೆರೆ ಹಿಡಿದು ದುಬಾರೆಗೆ ಲಾರಿಯ ಮೂಲಕ ಸಾಗಿಸಿ ಪಳಗಿಸಲಾಗುತ್ತಿದೆ ಎಂದರು. ಮಂಗಳವಾರ ಸೆರೆ ಹಿಡಿದ ಈ ಆನೆಗೆ 19 ರಿಂದ 20 ವರ್ಷ ಪ್ರಾಯವಾಗಿದ್ದು ಆರೋಗ್ಯವಾಗಿದೆ ಎಂದೂ ಅಧಿಕಾರಿ ತಿಳಿಸಿದರು.

More Images