ಭಾರೀ ಪ್ರಮಾಣದಲ್ಲಿ ಚರಂಡಿ ಪಾಲಾಗುತ್ತಿರುವ ನೀರು:ಪ ಪಂ ಅಧಿಕಾರಿಗಳ ನಿರ್ಲಕ್ಷ್ಯ

ಭಾರೀ ಪ್ರಮಾಣದಲ್ಲಿ ಚರಂಡಿ ಪಾಲಾಗುತ್ತಿರುವ ನೀರು:ಪ ಪಂ ಅಧಿಕಾರಿಗಳ ನಿರ್ಲಕ್ಷ್ಯ

CI   ¦    Mar 13, 2018 06:11:41 PM (IST)
ಭಾರೀ ಪ್ರಮಾಣದಲ್ಲಿ ಚರಂಡಿ ಪಾಲಾಗುತ್ತಿರುವ ನೀರು:ಪ ಪಂ ಅಧಿಕಾರಿಗಳ ನಿರ್ಲಕ್ಷ್ಯ

ಮೂಡಿಗೆರೆ: ಪಟ್ಟಣದ ನಿವಾಸಿಗಳು ಕುಡಿಯಬೇಕಾದ ನೀರು ಭಾರೀ ಪ್ರಮಾಣದಲ್ಲಿ ಚರಂಡಿ ಪಾಲಾಗುತ್ತಿದೆ. ಟ್ಯಾಂಕ್ ಸೇರಬೇಕಾದ ನೀರು ಪೊಲಾಗುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಂಡೂ ಕಾಣದಂತೆ ಕುರುಡಾಗಿದ್ದಾರೆ.

ಮೂಡಿಗೆರೆ ಪಟ್ಟಣದಿಂದ 6 ಕಿ.ಮೀ.ದೂರದ ಕಿತ್ಲೆಗಂಡಿಯ ಹೇಮಾವತಿ ನದಿಯಿಂದ ಪಟ್ಟಣದ ದೊಡ್ಡಿಬೀದಿಯಲ್ಲಿರುವ ಓವರ್ಹೆಡ್ ಟ್ಯಾಂಕ್ಗೆ ರಾತ್ರಿವೇಳೆ ನೀರು ಸರಬರಾಜು ಮಾಡಲಾಗುತ್ತಿದೆ. ಇದು ಕಳೆದ ಐದು ವರ್ಷಗಳಿಂದ ಬೃಹತ್ ಗಾತ್ರದ ಮುಖ್ಯ ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಪೊಲಾಗುತ್ತಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸದೆ ನಿರುಮ್ಮಳವಾಗಿ ನಿದ್ರೆ ಮಾಡುತ್ತಿದ್ದಾರೆ.

ಈ ಬಾರಿಯ ಭಾರೀ ಬಿಸಿಲಿನಿಂದಾಗಿ ಹೇಮಾವತಿ ನದಿ ಸಹಿತ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಬೀಜುವಳ್ಳಿಯ ಸುಂಡೇಕೆರೆ ಹಳ್ಳ ನೀರಿಲ್ಲದೆ ಬತ್ತಿ ಹೋಗಿದೆ. ಹೇಮಾವತಿ ನದಿಯಲ್ಲಿರುವ ಅಲ್ಪಸ್ವಲ್ಪ ನೀರನ್ನು ಓವರ್ಹೆಡ್ ಟ್ಯಾಂಕ್ ನಲ್ಲಿ ಶೇಖರಿಸಿ ಪಟ್ಟಣದ ನಿವಾಸಿಗಳಿಗೆ ಪೂರೈಕೆ ಮಾಡಲಾಗುತ್ತಿದೆ ಆದರೂ ಈ ಹಿಂದೆ ಪ್ರತೀ ವಾರ್ಡ್ ಗಳಿಗೆ 2 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ನದಿಗಳು ಬತ್ತಿ ಹೋಗಿರುವ ಕಾರಣ ಮೂರು ದಿನಗಳಿಗೊಮ್ಮೆ ನೀರು ಬಿಡುವುದಾಗಿ ಪ.ಪಂ ವಾಹನದಲ್ಲಿ ಧ್ವನಿವರ್ಧಕ ಬಳಸಿ ಸಾರಲಾಗಿತ್ತು.

ಈಗ ನಾಲ್ಕು ದಿನವಾದರೂ ನೀರು ಬಿಡುತ್ತಿಲ್ಲ. ನಿವಾಸಿಗಳು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿ ಇರುವಾಗ ಹೇಮಾವತಿ ನದಿಯಿಂದ ರಾತ್ರಿವೇಳೆ ಓವರ್ಹೆಡ್ ಟ್ಯಾಂಕ್ ಗೆ ನೀರು ತುಂಬಿಸುವ ವೇಳೆ 6 ಕಿ.ಮೀ.ದೂರದಿಂದ ಬಂದ ಮುಕ್ಕಾಲು ಪಾಲು ನೀರು ಮುಖ್ಯ ಪೈಪ್ ಒಡೆದು ಚರಂಡಿ ಸೇರುತ್ತಿದೆ. ದೊಡ್ಡಿಬೀದಿಯ ಟ್ಯಾಂಕ್ ಬಳಿಯಿಂದ ಜೆ.ಡಿಎಸ್.ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್, ಪಪಂ ಅಧ್ಯಕ್ಷೆ ರಮೀಜಾಬಿ, ಸದಸ್ಯ ಕಲೀಮುಲ್ಲಾ, ಶಾಸಕ ಬಿ.ಬಿ.ನಿಂಗಯ್ಯ ಅವರ ವಾಸವಿಲ್ಲದ ಹಳೇಮನೆ ಸಹಿತ ಪ್ರಭಾವಿ ವ್ಯಕ್ತಿಗಳ ಮನೆಎದುರೇ ಚರಂಡಿಯಲ್ಲಿ ಹರಿದು ಗೆಂಡೇಹಳ್ಳಿ ರಸ್ತೆ ಬದಿಯ ಚರಂಡಿ ಮೂಲಕ ರಾತ್ರಿಯಿಂದ ಬೆಳಗ್ಗೆವರೆಗೂ ಸುಂಡೇಕೆರೆ ಹಳ್ಳ ಸೇರುತ್ತಿದೆ. ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಹರಿಯುತ್ತದೆ. ಚರಂಡಿ ಪಾಲಾಗುವ ಭಾರೀ ಪ್ರಮಾಣದ ನೀರು ದೊಡ್ಡಿಬೀದಿಯ ಟ್ಯಾಂಕ್ ನಲ್ಲಿ ಶೇಖರಣೆಗೊಂಡರೂ ಪಟ್ಟಣದ ನಿವಾಸಿಗಳಿಗೆ ಪ್ರತೀದಿನವೂ ನೀರುಪೂರೈಕೆ ಮಾಡಬಹುದು.

ಮೂರು-ನಾಲ್ಕು ದಿನಗಳೆಂದು ಧ್ವನಿವರ್ಧಕದಲ್ಲಿ ಪಟ್ಟಣ ಪಂಚಾಯಿತಿ ಸಾರುವುದು ತಪ್ಪಿಸಬಹುದು. ಆದರೆ ಕಳೆದ 5 ವರ್ಷಗಳಿಂದಲೂ ಈ ಅವ್ಯವಸ್ಥೆಯನ್ನು ಅಧಿಕಾರಿಗಳು ಸರಿಪಡಿಸಿಲ್ಲ. ಪಪಂ ಅಧಿಕಾರಿಗಳನ್ನು ವಿಚಾರಿಸಿದರೆ, ನೀರು ಬಿಡುವ ಕಾರ್ಮಿಕರು ಬೇಕಾಬಿಟ್ಟಿ ನೀರುಬಿಟ್ಟು ಹಾಗಾಗಿದೆ.

ನಾಳೆಯಿಂದ ಹಾಗೇನೂ ಆಗೋದಿಲ್ಲ ಎಂದು ದಿನಂಪ್ರತಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಆದ್ದರಿಂದ ಶಾಸಕ ಬಿ.ಬಿ.ನಿಂಗಯ್ಯ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೆಲಸಕ್ಕೆ ಬಾರದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ವರ್ಗಾವಣೆಗೊಳಿಸಬೇಕು. ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿರುವ ನೀರನ್ನು ಮುಖ್ಯಪೈಪ್ ಸರಿಪಡಿಸುವ ಮೂಲಕ ತಡೆಹಿಡಿಯಬೇಕು. ಪಟ್ಟಣದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.