ಬಾಲ್ಯವಿವಾಹ ಅಪರಾಧದ ಬಗ್ಗೆ ಅರಿವು ಮೂಡಿಸಬೇಕು: ಜಿಲ್ಲಾಧಿಕಾರಿ ದೀಪಾ ಚೋಳನ್

ಬಾಲ್ಯವಿವಾಹ ಅಪರಾಧದ ಬಗ್ಗೆ ಅರಿವು ಮೂಡಿಸಬೇಕು: ಜಿಲ್ಲಾಧಿಕಾರಿ ದೀಪಾ ಚೋಳನ್

YK   ¦    Feb 14, 2020 01:17:55 PM (IST)
ಬಾಲ್ಯವಿವಾಹ ಅಪರಾಧದ ಬಗ್ಗೆ ಅರಿವು ಮೂಡಿಸಬೇಕು: ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ: ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಗ್ರಾಮ ಮಟ್ಟದ ಸಮಿತಿಗಳಲ್ಲಿ ಈ ಕುರಿತು ಚರ್ಚಿಸಿ, ಜನರಲ್ಲಿ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಗರದ ಆಲೂರು ವೆಂಕಟರಾವ ಭವನದಲ್ಲಿ ಬೆಳಗಾವಿ ವಿಭಾಗೀಯ ಮಟ್ಟದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆ ಕಾಯ್ದೆ ಕುರಿತು ಜರುಗಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಅವರು ಮಾತನಾಡಿದರು.

ಬಾಲ್ಯವಿವಾಹ ಎಂಬ ಪಿಡುಗು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಇದೆ. ಎಲ್ಲ ಇಲಾಖೆಗಳು ಕ್ರೀಯಾಶೀಲರಾಗಿ, ಕಾರ್ಯ ಪ್ರವೃತ್ತರಾದಲ್ಲಿ ಮಾತ್ರ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡಗನ್ನು ತೊಲಗಿಸಲು ಸಹಕಾರಿಯಾಗುವುದು ಎಂದು ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಚಿನ್ನಣ್ಣವರ ಆರ್.ಎಸ್.ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಇರುವ ಕಾನೂನುಗಳ ಕುರಿತು, ಶಿಕ್ಷೆ ಪ್ರಮಾಣ ಹಾಗೂ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಸಿ.ಸತೀಶ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕುರಿತಾದ ಬಿತ್ತಿ ಪತ್ರಗಳನ್ನು ಅನಾವರಣಗೊಳಿಸಿ, ಗ್ರಾಮ ಮಟ್ಟಗಳಲ್ಲಿ ಇರುವ ಸಮಿತಿಗಳನ್ನು ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಬಲ ಪಡಿಸಲು ಎಲ್ಲ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ. ರೇವತಿ, ಉಪನಿರ್ದೇಶಕಿ ಹಲೀಮಾ ಕೆ. ಹಾಗೂ ಯುನಿಸೇಫ್ ಪ್ರಾದೇಶಿಕ ಸಂಯೋಜಕರಾದ ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಸಿ. ಶೆಟ್ಟರ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಎಚ್. ಲಲಿತಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ನಿರೂಪಣಾಧಿಕಾರಿಗಳು ಎನ್.ಎ. ಪುಟ್ಟಪ್ಪನವರ ವಂದಿಸಿದರು. ಅಧೀಕ್ಷಕರಾದ ಮಂಜುನಾಥ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.