ಕೃಷಿ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕ್‍ನಿಂದ 100 ಕೋಟಿ ರೂ. ಗುರಿ ನಿಗದಿ

ಕೃಷಿ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕ್‍ನಿಂದ 100 ಕೋಟಿ ರೂ. ಗುರಿ ನಿಗದಿ

CI   ¦    Sep 14, 2018 06:14:55 PM (IST)
ಕೃಷಿ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕ್‍ನಿಂದ 100 ಕೋಟಿ ರೂ. ಗುರಿ ನಿಗದಿ

ಮಡಿಕೇರಿ: ಕೊಡಗು ಜಿಲ್ಲೆಯ ಕೃಷಿಕರ ಬೆನ್ನೆಲುಬಾಗಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಕೃಷಿ ಹಾಗೂ ಕೃಷಿ ಸಂಬಂಧಿ ಸಾಲಗಳ ವಿತರಣೆಗೆ 100 ಕೋಟಿ ರೂ.ಗಳ ಗುರಿ ನಿಗದಿಪಡಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ.ಮಂಜುನಾಥ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಪ್ರಗತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯ ಸರಕಾರದ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಯಡಿ ರೈತರಿಗೆ ಶೂನ್ಯ ಬಡ್ಡಿದರದ ಸಾಲ ಒಳಗೊಂಡಂತೆ ಅಲ್ಪಾವಧಿ ಬೆಳೆ ಸಾಲ ನೀಡುವ ಸಲುವಾಗಿ 617.88 ಕೋಟಿ ರೂ.ಗಳಷ್ಟು ಕ್ರಮಿಕ ಪತ್ತಿನ ಮಿತಿಯನ್ನು ಸಹಕಾರ ಸಂಘಗಳಿಗೆ ಮಂಜೂರಾತಿ ಮಾಡುವ ಮೂಲಕ ಬೆಳೆ ಸಾಲ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕೃಷಿಯೇತರ ಸಾಲ ನೀಡಿಕೆಗೆ 310 ಕೋಟಿ ರೂ. ನಿಗದಿಪಡಿಸಿದ್ದು, ಗುರಿ ಸಾಧನೆಗೆ ವಿವಿಧ ಸಾಲ ಯೋಜನೆಗಳನ್ನು ರೂಪಿಸಲಾಗಿದೆ. ಅಲ್ಲದೆ ಚಿನ್ನಾಭರಣಗಳ ಮೇಲೆ ಗರಿಷ್ಠ 10 ಲಕ್ಷಗಳವರೆಗೆ ಈಡಿನ ಸಾಲ ಮತ್ತು ಗರಿಷ್ಠ 5 ಲಕ್ಷ ವರೆಗಿನ ಚಿನ್ನಾಭರಣ ಓವರ್ ಡ್ರಾಫ್ಟ್ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸಹಕಾರ ಸಂಘ ಹಾಗೂ ಸಹಕಾರ ಸಿಬ್ಬಂದಿಗಳಿಗೆ ಸಹಕಾರ ಅಧ್ಯಯನಕ್ಕಾಗಿ ಹಣಕಾಸು ಸೌಲಭ್ಯ ಒದಗಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಬ್ಯಾಂಕ್ 2021ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ ಬ್ಯಾಂಕ್‍ನ ಎಲ್ಲಾ ಶಾಖೆಗಳ ಹಳೆಯ ಕೌಂಟರ್‍ಗಳಲ್ಲಿ ಆಂತರಿಕ ವಿನ್ಯಾಸಗೊಳಿಸಿ ನವೀಕರಿಸಲಾಗುವುದು ಎಂದು ಎಂದ ಅವರು, ಈಗಾಗಲೇ 17 ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ ನಾಲ್ಕು ಶಾಖೆಗಳನ್ನು ತೆರೆಯುವ ಸಂಬಂಧ ಅನುಮತಿ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.