ಮರಳು ಲಾರಿ ಅಪಹರಣ: ಓರ್ವನ ಸೆರೆ

ಮರಳು ಲಾರಿ ಅಪಹರಣ: ಓರ್ವನ ಸೆರೆ

SK   ¦    May 16, 2018 04:04:02 PM (IST)
ಮರಳು ಲಾರಿ ಅಪಹರಣ: ಓರ್ವನ ಸೆರೆ

ಕಾಸರಗೋಡು: ಮರಳು ಸಾಗಾಟ ಲಾರಿಯನ್ನು ತಡೆದು ಅಪಹರಿಸಿದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಾಲಕನನ್ನು ಬಲವಂತವಾಗಿ ಕೆಳಕ್ಕಿಳಿಸಿ ಹೊಯ್ಗೆ ಲಾರಿಯನ್ನು ಅಪಹರಿಸಿದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಉಕ್ಕಿನಡ್ಕ ಕೊಳಂಬೆಯ ಅಬ್ದುಲ್ ಇರ್ಫಾನ್(28) ಬಂಧಿತ ಆರೋಪಿ. ಈತನ ಜತೆಗೆ ಪ್ರಕರಣದಲ್ಲಿ ಶಾಮೀಲಾಗಿದ್ದ ನೌಶಾದ್, ಖಲೀಲ್, ಜುಹಾರ್ ಎಂಬವರು ತಲೆಮರೆಸಿಕೊಂಡಿದ್ದಾರೆ.

ಮೇ 9ರಂದು ರಾತ್ರಿ ಪೆರ್ಲ ಇಡಿಯಡ್ಕದಲ್ಲಿ ಪೆರ್ಲ ಕಡೆಯಿಂದ ಮರಳು ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಇಡಿಯಡ್ಕದಲ್ಲಿ ತಡೆದು ನಿಲ್ಲಿಸಿದ ನಾಲ್ವರ ತಂಡ, ಚಾಲಕ ಪ್ರಶಾಂತ್‌ರಿಗೆ ಬೆದರಿಕೆಯೊಡ್ಡಿ ಬಲವಂತವಾಗಿ ಕೆಳಗಿಳಿಸಿ ಮರಳು ಲಾರಿ ಸಹಿತ ಪರಾರಿಯಾಗಿತ್ತು. ಈ ಬಗ್ಗೆ ಚಾಲಕ ಪ್ರಶಾಂತ್ ಕುಮಾರ್ ಕೂಡಲೇ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು.

ಈ ವೇಳೆ ಪೆರ್ಲದಲ್ಲಿ ವಾಹನ ತಪಾಸಣೆ ನಿರತರಾಗಿದ್ದ ಪೊಲೀಸರ ತಂಡ ಅಪಹರಣಕ್ಕೀಡಾದ ಲಾರಿಯ ಹುಡುಕಾಟಕ್ಕೆ ತೊಡಗಿದೆ. ಲಾರಿಯನ್ನು ಬಾಡೂರು ಭಾಗಕ್ಕೆ ಕೊಂಡೊಯ್ದ ಬಗ್ಗೆ ತಿಳಿದು ಪೊಲೀಸರು ಅತ್ತ ತೆರಳುತ್ತಿದ್ದಾಗ ಬೆದ್ರಂಪಳ್ಳದಲ್ಲಿ ಮರಳು ಇಳಿಸಿ ಇದೇ ಟಿಪ್ಪರ್ ಲಾರಿ ಮರಳುತ್ತಿತ್ತು. ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಅದರಲ್ಲಿದ್ದ ಓರ್ವ ಲಾರಿಯನ್ನು ತೊರೆದು ಪರಾರಿಯಾಗಿದ್ದನು. ಈ ಪ್ರಕರಣದಲ್ಲಿ ಇದೀಗ ಅಬ್ದುಲ್ ಇರ್ಫಾನ್‌ನನ್ನು ಬಂಧಿಸಲಾಗಿದೆ.