ಶ್ರೀರಂಗಪಟ್ಟಣದ ಕೋಡಿಶೆಟ್ಟಿಪುರದಲ್ಲಿ ಗಣಿಧೂಳು

ಶ್ರೀರಂಗಪಟ್ಟಣದ ಕೋಡಿಶೆಟ್ಟಿಪುರದಲ್ಲಿ ಗಣಿಧೂಳು

Aug 12, 2017 12:19:52 PM (IST)
ಶ್ರೀರಂಗಪಟ್ಟಣದ ಕೋಡಿಶೆಟ್ಟಿಪುರದಲ್ಲಿ ಗಣಿಧೂಳು

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಿಪುರದಲ್ಲಿ ನಡೆಯುತ್ತಿರುವ ಅಕ್ರಮ ಸ್ಟೋನ್ ಕ್ರಷರ್ನಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದರೂ ಜಿಲ್ಲಾಡಳಿತ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಸುತ್ತಮುತ್ತಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಈಗಾಗಲೇ ಕೋಡಿಶೆಟ್ಟಿಪುರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಸುತ್ತಮುತ್ತಲಿನ ರೈತರ ಜಮೀನಿಗೆ ಹಾನಿಯಾಗುತ್ತಿದ್ದು, ಕ್ರಷರ್ ಮಾಲೀಕರು ಅಕ್ಕ-ಪಕ್ಕದ ಜಮೀನುಗಳಿಗೆ ಮಣ್ಣು ಸುರಿದು ತೊಂದರೆ ನೀಡುತ್ತಿದ್ದು, ಸ್ಟೋನ್ ಕ್ರಷರ್ನಿಂದ ಮೇಲೇಳುವ ಧೂಳಿನಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸದಂತಾಗಿದೆ ಎಂದು ರೈತರು ದೂರಿದ್ದಾರೆ.

ಈ ಬಗ್ಗೆ ಅಳಲು ತೋಡಿಕೊಂಡಿರುವ ರೈತರು ಜಮೀನಿಗೆ ಹಾರಿ ಬರುತ್ತಿರುವ ಧೂಳು ಕೃಷಿ ಚಟುವಟಿಕೆಯನ್ನು ಮಾಡದಂತೆ ತಡೆಯೊಡ್ಡಿದೆ. ಇದರಿಂದ ಬೆಳೆ ಬೆಳೆಯಲಾಗುತ್ತಿಲ್ಲ. ಸ್ಟೋನ್ ಕ್ರಷರ್ನಿಂದ ಮೇಲೇಳುವ ಧೂಳು ಮತ್ತು ಕಲ್ಲುಗಳು ಸಂಪೂರ್ಣವಾಗಿ ಜಮೀನನ್ನು ತುಂಬಿಕೊಳ್ಳುತ್ತಿವೆ. ಜತೆಗೆ ಅಸ್ತಮಾ ರೋಗಕ್ಕೂ ಎಡೆ ಮಾಡಿಕೊಡುತ್ತಿದೆ.ಪರಿಸರ ಇಲಾಖೆಯಿಂದ ಜಲ್ಲಿ ಕ್ರಷರ್ ನಡೆಸುವುದಕ್ಕೆ ಅನುಮತಿಯನ್ನು ಪಡೆದುಕೊಂಡಿಲ್ಲ. ಸ್ಟೋನ್ ಕ್ರಷರ್ಗಳಿಗೆ ಅಗತ್ಯವಿರುವ ಸಿ-ಫಾರಂನ್ನೂ ಪಡೆದಿಲ್ಲ. ಇದರ ನಡುವೆ ಕ್ರಷರ್ ಆರಂಭಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡುವ ಮೂಲಕ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಅಕ್ರಮ ಸ್ಟೋನ್ ಕ್ರಷರ್ ನಡೆಸುತ್ತಿರುವ ಬಗ್ಗೆ ಜಿಲ್ಲಾಡಳಿತ ಸೇರಿದಂತೆ, ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಇದರತ್ತ ಯಾವುದೇ ಗಮನ ಹರಿಸಿಲ್ಲ ಎಂಬುದು ಕೋಡಿಶೆಟ್ಟಿಪುರ ಗ್ರಾಮಸ್ಥರ ಆರೋಪವಾಗಿದೆ.ಕೋಡಿಶೆಟ್ಟಿಪುರದ ಕೆ.ಆರ್.ಸಿ.ಸ್ಟೋನ್ ಕ್ರಷರ್ ನಡೆಯುತ್ತಿದ್ದು ಇದರ ಪಕ್ಕದಲ್ಲೇ ಸರ್ವೇ ನಂ.82/2ರಲ್ಲಿ 1 ಎಕರೆ 20 ಗುಂಟೆ ಪ್ರದೇಶದಲ್ಲಿ ಶಶಿಕುಮಾರ್ ಎಂಬುವರು ವ್ಯವಸಾಯ ಮಾಡಿಕೊಂಡಿದ್ದರು. ಕ್ರಷರ್ ಆರಂಭದ ಬಳಿಕ ಅಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಸ್ಟೋನ್ ಕ್ರಷರ್ ಮಾಲೀಕರು ಅಕ್ರಮವಾಗಿ ಮಣ್ಣನ್ನು ಅಕ್ಕ-ಪಕ್ಕದ ಜಮೀನುಗಳಿಗೆ ತುಂಬಿದ್ದಾರೆ. ಕ್ರಷರ್ನಿಂದ ಮೇಲೇಳುವ ಧೂಳು ಸುತ್ತಮುತ್ತಲ ಪ್ರದೇಶಕ್ಕೆ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸದಿರುವುದು ಸುತ್ತಲಿನ ಕೃಷಿಕರಿಗೆ ಮಾರಕವಾಗಿ ಪರಿಣಮಿಸಿದೆ ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಲಿ ಎಂಬುದು ಗ್ರಾಮಸ್ಥರ ಮನವಿಯಾಗಿದೆ