ಜಿಲ್ಲೆಯಲ್ಲಿ ಆಹಾರ ಸಾಮಾಗ್ರಿಗಳ ಕೊರತೆಯುಂಟಾಗದು: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಆಹಾರ ಸಾಮಾಗ್ರಿಗಳ ಕೊರತೆಯುಂಟಾಗದು: ಜಿಲ್ಲಾಧಿಕಾರಿ

SK   ¦    Mar 24, 2020 04:33:57 PM (IST)
ಜಿಲ್ಲೆಯಲ್ಲಿ ಆಹಾರ ಸಾಮಾಗ್ರಿಗಳ ಕೊರತೆಯುಂಟಾಗದು: ಜಿಲ್ಲಾಧಿಕಾರಿ

ಕಾಸರಗೋಡು: ಜಿಲ್ಲೆಯಲ್ಲಿ ಆಹಾರ ಸಾಮಾಗ್ರಿಗಳ ಕೊರತೆಯುಂಟಾಗದು ಮತ್ತು ಆಹಾರಧಾನ್ಯಗಳೊಂದಿಗೆ ಆಗಮಿಸುವ ಸರಕು ವಾಹನಗಳಿಗೆ ನಿಷೇಧವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. 

ತಲೆಹೊರೆ ಕಾರ್ಮಿಕರ ಕೊರತೆ ಕಾಡುತ್ತಿದ್ದರೂ, ಅದನ್ನು ಈಗ ಪರಿಹರಿಸಲಾಗಿದೆ ಎಂದು ಹೇಳಿದರು.

ಪ್ರತಿ ಘಟಕದಲ್ಲಿ ತಲಾ ಅರ್ಧಾಂಶ ಕಾರ್ಮಿಕರು ಷಿಫ್ಟ್ ತಳಹದಿಯಲ್ಲಿ ಕಾರ್ಯನಿರತರಾಗಲಿದ್ದಾರೆ. ತಲೆಹೊರೆ ಕಾರ್ಮಿಕರ ಕೊರತೆಯಿದ್ದಲ್ಲಿ ಪೊಲೀಸರ ಸೇವೆ ಬಳಸಿಕೊಳ್ಳಲಾಗುವುದು. ಅನಿವಾರ್ಯ ಸಾಮಾಗ್ರಿಗಳ ಲಭ್ಯತೆಗೆ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಜಿಲ್ಲೆಯಲ್ಲಿ ಅಂಗಡಿಗಳು ತೆರೆದು ಕಾರ್ಯಾಚರಿಸಲಿವೆ. ಬೇಕರಿಗಳೂ ಈ ನಿಟ್ಟಿನಲ್ಲಿ ತೆರೆದುಕೊಳ್ಳಬೇಕಾಗಿದೆ. ಆದರೆ ಬೇಕರಿಗಳಲ್ಲಿ ಚಹಾ, ಕಾಫಿ ಸಹಿತ ಪಾನೀಯಗಳ ವಿತರಣೆ ನಡೆಸಕೂಡದು. ಯಾವ ಕಾರಣಕ್ಕೂ ಅಂಗಡಿಗಳಲ್ಲಿ ಜನ ಗುಂಪು ಸೇರಕೂಡದು. ಅನಿವಾರ್ಯ ಸಾಮಾಗ್ರಿಗಳ ಖರೀದಿಗೆ ಅಂಗಡಿಗಳಿಗೆ ತಲಪುವವರು ಪೊಲೀಸರ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಸಾಲಾಗಿ ನಿಲ್ಲಬೇಕು. ಮೀನು, ಮಟನ್ ಸ್ಟಾಲ್ ಗಳೂ ತೆರೆದು ಕಾರ್ಯಾಚರಿಸಬೇಕು. ಅಲ್ಲಿಯೂ ಜನ ಗುಂಪು ಸೇರಕೂಡದು. ಈ ಆದೇಶ ಉಲ್ಲಂಘಿಸಿದಲ್ಲಿ ಆ ಅಂಗಡಿಯ ಮುಚ್ಚುಗಡೆ ಆದೇಶ ನೀಡಲಾಗುವುದು ಎಂದವರು ಹೇಳಿದರು.

 ಕಟ್ಟುನಿಟ್ಟು ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಇಬ್ಬರು ಕೊರೋನಾ ಸೋಂಕು ಬಾಧಿತರ ವಿರುದ್ಧ ಕಾನೂನು ಕ್ರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಿಯಂತ್ರಣ ಹೇರಿದ್ದರೂ, ಅದನ್ನು ಉಲ್ಲಂಘಿಸಿ ಸಾರ್ವಜನಿಕ ಸಂಪರ್ಕ ನಡೆಸಿದ ಆರೋಪದಲ್ಲಿ ಇಬ್ಬರು ಆನಿವಾಸಿ ಭಾರತೀಯರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದೆ ಅವರು ವಿದೇಶಕ್ಕೆ ತೆರಳಲು ಅನುಮತಿ ನೀಡುವುದಿಲ್ಲ  ಎಂದವರು ಹೇಳಿದರು. ನಿಷೇದಾಜ್ಞೆ ಜಾರಿಯಲ್ಲಿರುವ ವೇಳೆ ಅನೇಕ ಉಲ್ಲಂಘನೆ ಪ್ರಕರಣಗಳ ಪತ್ತೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆ ಕಟ್ಟುನಿಟ್ಟು ಪಾಲಿಸುವಂತೆ ವಿನಂತಿಸುವುದಿಲ್ಲ, ಬದಲಾಗಿ ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

 

ಸರಕಾರದ ಸಲಹೆ-ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಾಳಸಂತೆ, ಅಕ್ರಮ ದಾಸ್ತಾನು, ಅಕ್ರಮವಾಗಿ ಬೆಲೆ ಹೆಚ್ಚಳಗೊಳಿಸುವಿಕೆ ಗಮನಕ್ಕೆ ಬಂದರೆ ಅಂಥಾ ವ್ಯಾಪಾರ ಸಂಸ್ಥೆಗಳ ವಿರುದ್ಧ ಪರವಾನಗಿ ರದ್ದತಿ ಸಹಿತ ಕ್ರಮ ಕೈಗೊಳ್ಳಲಾಗುವುದು. ನೌಕರಿ ಖಾತರಿ ಯೋಜನೆ ಕಾರ್ಮಿಕರು, ತೋಟಗಳ ಕಾರ್ಮಿಕರು ಸಹಿತ ಮಂದಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ನೌಕರಿ ನಡೆಸಬಹುದು. ಹಗಲು ಹೊತ್ತು ಸೂರ್ಯಾಘಾತ ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಇವರ ಕೆಲಸದ ಅವಧಿಯನ್ನು ಪುನರ್ ರಚಿಸಲಾಗುವುದು ಎಂದು ಹೇಳಿದರು.

 ರೋಗಿಯನ್ನು ಆಸ್ಪತ್ರೆಗೆ ಒಯ್ಯುವ ವಾಹನದಲ್ಲಿ 5 ಮಂದಿಗಿಂತ ಅಧಿಕ ಜನ ಇರಕೂಡದು. ಬೈಕ್ ಗಳಲ್ಲಿ ಒಬ್ಬರಿಗಿಂತ ಅಧಿಕ ಮಂದಿ ಯಾತ್ರೆ ನಡೆಸಕೂಡದು ಉಳಿದಂತೆ ಯಾವ ಕಾರಣಕ್ಕೂ ಆತಂಕಕ್ಕೀಡಾಗಬೇಕಾದ ಅಗತ್ಯವಿಲ್ಲ. ಯಾರಿಗೂ ಯಾವುದೇ ರೀತಿಯ ಸಂಕಷ್ಟ ತಲೆದೋರದು. ಸರಕಾರದ ಸಲಹೆ-ಸೂಚನೆಗಳನ್ನು ಪಾಲಿಸುವಲ್ಲಿ ಎಲ್ಲ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.