ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಪರಾರಿ

ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಪರಾರಿ

SK   ¦    Sep 14, 2018 08:20:30 PM (IST)
ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಪರಾರಿ

ಕಾಸರಗೋಡು: ಪೆರಿಯ ಚಾಕಟ್ಟಿಪ್ಪಾರದ ಝುಬೈದಾ ಎಂಬವರ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಾಞಂಗಾಡಿನ ಸಬ್ ಜೈಲಿನಲ್ಲಿದ್ದ ಸುಳ್ಯ ಅಜ್ಜಾವರ ಗ್ರಾಮದ ಅಬ್ದುಲ್ ಅಝೀಝ್ (30) ಎಂಬಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಪೊಲೀಸರೊಂದಿಗೆ ಹಾಜರಾಗಿ ವಾಪಾಸು ತೆರಳುವ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.

ಆತ ಉಪ್ಪಿನಂಗಡಿಯಲ್ಲಿ ಮಹಿಳೆಯ ಕೊಲೆ, ಕಾಸರಗೋಡು ಚೆಂಬರಿಕದ ವೃದ್ಧ ಮಹಿಳೆಯ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಾಸರಗೋಡಿನ ಕಾಞಂಗಾಡ್ ಸಬ್ ಜೈಲಿನಲ್ಲಿದ್ದ. ಈ ಹಿಂದೆ ಸುಳ್ಯ ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೂ ಆಗಿದ್ದ ಈತನನ್ನು ಪ್ರಕರಣದ ವಿಚಾರಣೆಗಾಗಿ ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಸೆ.14ರಂದು ಕರೆ ತಂದಿದ್ದರು. ವಿಚಾರಣೆ ಬಳಿಕ ಪುನಃ ಕೊಂಡೊಯ್ಯುವ ವೇಳೆ ಈತ ಸುಳ್ಯ ಬಸ್ ನಿಲ್ದಾಣದ ಶೌಚಾಲಯಕ್ಕೆಂದು ತೆರಳಿದ್ದು ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಜೊತೆಗಿದ್ದ ಪೊಲೀಸರು ಈ ಘಟನೆಯನ್ನು ಸುಳ್ಯ ಠಾಣೆ ಪೊಲೀಸರಿಗೆ ತಿಳಿಸಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ನಗರದೆಲ್ಲೆಡೆ ಹುಡುಕಾಟದಲ್ಲಿ ತೊಡಗಿದ್ದಾರೆ. ಸುಳ್ಯದಿಂದ ಹೊರಹೋಗುವ ಎಲ್ಲಾ ಮಾರ್ಗಗಳನ್ನು ಪೊಲೀಸರು ಸುತ್ತುವರಿದಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

2018ರ ಜನವರಿ 19ರಂದು ಝುಬೈದಾ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಲ್ಲಿ ಏಕಾಂಗಿಯಾಗಿದ್ದ ಝುಬೈದಾ ಎರಡು ದಿನಗಳಿಂದ ಹೊರಗಡೆ ಕಾಣದಿರುವುದರಿಂದ ಸಂಶಯಗೊಂಡು ಪರಿಸರವಾಸಿಗಳು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು.