ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ ಸಾವು: ಶವವಿಟ್ಟು ಪ್ರತಿಭಟನೆ

ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ ಸಾವು: ಶವವಿಟ್ಟು ಪ್ರತಿಭಟನೆ

RK   ¦    Oct 12, 2017 06:18:33 PM (IST)
ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ ಸಾವು: ಶವವಿಟ್ಟು ಪ್ರತಿಭಟನೆ

ಬಣಕಲ್: ಬಾಳೂರು ಹೊರಟ್ಟಿಯ ಕಾರ್ಮಿಕ ಬಣಕಲ್ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ನಂತರ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಕ್ಲಿನಿಕ್ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಬಣಕಲ್ ಮತ್ತಿಕಟ್ಟೆ ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್ ಗೆ ಅಸ್ವಸ್ಥಗೊಂಡ ವಿಜಯ್(40) ಎಂಬವರು ಚಿಕಿತ್ಸೆಗೆಂದು ಅ.8ರಂದು ಬಂದಿದ್ದು, ಆ ವೇಳೆ ಕ್ಲಿನಿಕ್ ನ ಚನ್ನಪ್ಪ ಎಂಬವರು 3 ಇಂಜೆಕ್ಷನ್ ಮತ್ತು ಮಾತ್ರೆಗಳನ್ನು ನೀಡಿದ್ದರು. ಮನೆಗೆ ಹೋದ ನಂತರ ತಡರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಮಂಗಳೂರಿಗೆ ಕರೆದ್ಯೊಯುವಂತೆ ಸೂಚಿಸಿದ್ದರು. ಮಂಗಳೂರು ಸಾಗುವ ಮಾರ್ಗ ಮಧ್ಯೆ ವಿಜಯ್ ಮೃತಪಟ್ಟಿದ್ದಾರೆ.

ಬಣಕಲ್ ನ ಖಾಸಗಿ ಕ್ಲಿನಿಕ್ ನ ಚನ್ನಪ್ಪ ಎಂಬವರು ನೀಡಿದ ಚಿಕಿತ್ಸೆಯಿಂದ ವಿಜಯ್ ಮೃತಪಟ್ಟಿದ್ದಾರೆ ಎಂದು ಕ್ಲಿನಿಕ್ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಆರೋಗ್ಯ ನಿರೀಕ್ಷಕರು ಆಗಮಿಸಬೇಕು. ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಚನ್ನಪ್ಪ ಎಂಬುವವರು ಮೂಡಿಗೆರೆ ತಾಲೂಕಿನ ಭಾರತಿಬೈಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಬಣಕಲ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ಗಂಟೆ ಕಳೆದರೂ ಸ್ಥಳಕ್ಕೆ ಅಧಿಕಾರಿಗಳು ಆಗಮಿಸದಿದ್ದಾಗ ರೊಚ್ಚಿಗೆದ್ದ ಪ್ರತಿಭಟನಾಕಾರರು ಕ್ಲಿನಿಕ್ ಮತ್ತು ಮೆಡಿಕಲ್ ನ ಕಿಟಕಿ ಗಾಜುಗಳನ್ನು ಒಡೆದು ಹಾಕಿದರು. ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದಾಗ ಬಣಕಲ್, ಬಾಳೂರು, ಮೂಡಿಗೆರೆ ಮತ್ತು ಗೋಣಿಬೀಡು ಠಾಣೆಯ ಪೊಲೀರನ್ನು ಕರೆಸಲಾಯಿತು. ಕೆಲವರು ಕ್ಲಿನಿಕ್ ಗೆ ಕಲ್ಲು ತೂರಲು ಯತ್ನಿಸಿದಾಗ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹೆಣಗಾಡುವಂತಾಯಿತು. ಮೂಡಿಗೆರೆಯಿಂದ ಸಶಸ್ತ್ರ ಮೀಸಲು ಪಡೆ ಕರೆಸಲಾಯಿತು.

ಸ್ಥಳಕ್ಕೆ ಡಿವೈಎಸ್ಪಿ ಶೇಖ್ ಹುಸೇನ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಜಿಲ್ಲಾ ಆರೋಗ್ಯ ನಿರೀಕ್ಷಕರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪೊಲೀಸರ ಮನವೊಲಿಕೆಗೆ ಜಗ್ಗಲಿಲ್ಲ. ನಂತರ ಶಾಸಕ ಬಿ.ಬಿ.ನಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸತತ ಪ್ರಯತ್ನದ ನಂತರ ವೈಎಸ್ಪಿ ಶೇಖ್ ಹುಸೇನ್ ಮತ್ತು ಶಾಸಕ ಬಿ.ಬಿ.ನಿಂಗಯ್ಯ ಮತ್ತು ಸ್ಥಳೀಯ ಮುಖಂಡ ಮಾತಿಗೆ ಒಪ್ಪಿ ಮೃತರ ಸಂಬಂಧಿಕರು ಪ್ರತಿಭಟನೆ ಹಿಂತೆಗೆದುಕೊಂಡರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೂಡಿಗೆರೆ ಶವಾಗಾರಕ್ಕೆ ಕಳಿಸಿಕೊಡಲಾಯಿತು.