ಕಾಸು ಕೊಡಿ ಚೆಂಡು ಹೂ ಜೊತೆ ಸೆಲ್ಫಿ ತಗೊಳ್ಳಿ

ಕಾಸು ಕೊಡಿ ಚೆಂಡು ಹೂ ಜೊತೆ ಸೆಲ್ಫಿ ತಗೊಳ್ಳಿ

LK   ¦    Aug 10, 2017 10:00:45 AM (IST)
ಕಾಸು ಕೊಡಿ ಚೆಂಡು ಹೂ ಜೊತೆ ಸೆಲ್ಫಿ ತಗೊಳ್ಳಿ

ಚಾಮರಾಜನಗರ: ಮೊದಲೆಲ್ಲ ರಸ್ತೆಯಲ್ಲಿ ಸಂಚರಿಸುವಾಗ ಹೂ, ಹಣ್ಣುಗಳಿಂದ ಕಂಗೊಳಿಸುತ್ತಿದ್ದ ಜಮೀನುಗಳಲ್ಲಿ ಮನಸ್ಸೋ ಇಚ್ಚೆ ಫೋಟೋ ತೆಗೆದುಕೊಳ್ಳಬಹುದಾಗಿತ್ತು. ಆದರೆ ಈಗ ಸೆಲ್ಫಿ ಯುಗ ಎಲ್ಲೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಬಹುತೇಕರದ್ದಾಗಿದೆ. ಏನೇ ಕಾಣಿಸಲಿ ಅದರ ಬಳಿ ಸೆಲ್ಫಿ ತೆಗೆದುಕೊಳ್ಳದಿದ್ದರೆ ಏನೋ ಕಳೆದುಕೊಂಡ ಅನುಭವ.ಸೆಲ್ಫಿ ಪ್ರಿಯರಿಗೆ ಸುಂದರವಾಗಿರುವುದು ಏನೇ ಕಂಡರೂ ಮೊದಲು ಅದರ ಚಿತ್ರ ತೆಗೆದು ಪಕ್ಕದಲ್ಲಿ ತಾವು ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆಂಬ ಆಲೋಚನೆ ಬಂದೇ ಬರುತ್ತೆ. ಇಂತಹ ಸೆಲ್ಫಿ ಪ್ರಿಯರಿಗೆ ಚೆಂಡು ಹೂ ಬೆಳೆದ ಜಮೀನಿನಲ್ಲಿ ಫೋಟೋ ಕ್ಲಿಕ್ ಮಾಡಲು ಅವಕಾಶ ಮಾಡಿಕೊಟ್ಟು ಒಂದಷ್ಟು ಹಣ ಸಂಪಾದಿಸುತ್ತಿರುವ ರೈತರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಾಣಸಿಗುತ್ತಾರೆ.

ಗುಂಡ್ಲುಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 ರ ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಮದ್ದೂರು, ಚನ್ನಮಲ್ಲೀಪುರ ಗ್ರಾಮಗಳಲ್ಲಿ ಚೆಂಡು ಹೂ ಬೆಳೆಯಲಾಗಿದ್ದು, ಈ ಹೂಗಳು ರಸ್ತೆಯಲ್ಲಿ ತೆರಳುವ ಪ್ರವಾಸಿಗರನ್ನು ಸೆಳೆಯುತ್ತಿವೆ. ಹೀಗಾಗಿ ರಸ್ತೆಯಲ್ಲಿ ತೆರಳುವವರು ಅದರತ್ತ ನೋಟ ಬೀರುತ್ತಾರೆ. ಕೆಲವರು ತಮ್ಮ ವಾಹನಗಳನ್ನು ನಿಲ್ಲಿಸಿ ಹೂವಿನ ಸುಂದರ ದೃಶ್ಯವನ್ನು ಸೆರೆಹಿಡಿಯುತ್ತಾರೆ. ಮತ್ತೆ ಕೆಲವರು ಜಮೀನಿನ ಒಳಗೆ ಹೋಗಿ ಚೆಂಡು ಹೂ ಜತೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಮೊದಮೊದಲು ರೈತರು ಕೂಡ ಸುಮ್ಮನಿದ್ದರು. ದಿನಕಳೆದಂತೆ ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿ ಕಿರಿಕಿರಿಯಾಗ ತೊಡಗಿತು. ಇದರಿಂದ ರೈತರು ಎಚ್ಚೆತ್ತುಕೊಂಡರು. ತಮ್ಮ ಜಮೀನಿನಲ್ಲಿ ಸೆಲ್ಫಿ ತೆಗೆದುಕೊಳ್ಳೋರಿಗೆ 10 ರಿಂದ 50 ರೂ.ವರೆಗೆ ಶುಲ್ಕ ವಿಧಿಸತೊಡಗಿದರು.
ಹಣ ಕೊಡಬೇಕೆಂದಾಗ ಕೆಲವರು ಮೂಗು ಮುರಿದುಕೊಂಡು ಮುಂದೆ ಹೋದರೆ ಮತ್ತೆ ಕೆಲವರು ಅಯ್ಯೋ ಅಷ್ಟೆನಾ ಎನ್ನುತ್ತಾ ಹಣ ಕೊಟ್ಟು ತಮಗೆ ಬೇಕಾದಂತೆ ಫೋಟೋ ತೆಗೆದು ಕೊಳ್ಳತೊಡಗಿದರು. ಇದೀಗ ಪ್ರವಾಸಿಗರ ಸೆಲ್ಫಿಯಿಂದ ರೈತರಿಗೂ ಒಂದಷ್ಟು ಕಾಸು ಬರುತ್ತಿದೆ.

ಚೆಂಡು ಹೂ ಬೆಳೆದ ಹಳ್ಳಿಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದು ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುತ್ತಿದೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುತ್ತಾರೆ. ದೂರದಿಂದ ಟ್ರಿಪ್ ಬರುವ ಯುವಕ, ಯುವತಿಯರಂತು ಜಮೀನು ತುಂಬಾ ಓಡಾಡಿ ತಮಗೆ ಬೇಕಾದಂತೆ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಾರೆ.
ಸದ್ಯಕ್ಕೆ ಜಮೀನಿನಲ್ಲಿ ಹೂವು ಅರಳಿದ್ದು ಅದು ಕೊಯ್ಲು ಮಾಡುವವರೆಗೂ ರೈತರಿಗೆ ಒಂದಷ್ಟು ಖರ್ಚಿಗೆ ಕಾಸು ಬರುತ್ತಿರುವುದರಿಂದ ಖುಷಿಯಾಗಿದ್ದಾರೆ.

More Images