ಐದು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಉತ್ತಮ ಅಭಿವೃದ್ಧಿ: ನಿರ್ಮಲಾ ಸೀತಾರಾಮನ್

ಐದು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಉತ್ತಮ ಅಭಿವೃದ್ಧಿ: ನಿರ್ಮಲಾ ಸೀತಾರಾಮನ್

SB   ¦    Apr 15, 2019 08:18:49 PM (IST)
ಐದು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಉತ್ತಮ ಅಭಿವೃದ್ಧಿ: ನಿರ್ಮಲಾ ಸೀತಾರಾಮನ್

ಕಾರವಾರ: ಐದು ವರ್ಷದ ಆಡಳಿತ ಅವಧಿಯಲ್ಲಿ ಎಂದಿಗೂ ಕಾಣದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಅವರು ಕಾರವಾರದ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ನಮ್ಮ ದೇಶದ ಭ್ರಷ್ಟಾಚಾರದ ಮೂಲ ಒಂದು ಕುಟುಂಬ. ಈ ಕುಟುಂಬ ಸದಸ್ಯರಿಂದ ಕಳೆದ 70 ವರ್ಷಗಳಿಂದ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.

ದೇಶದ ಅತೀ ಸೂಕ್ಷ್ಮ ರಕ್ಷಣಾ ನಿರ್ಧಾರದಲ್ಲೂ ಸಹ ಮೂಗು ತೂರಿಸಿ ಡೀಲ್ ಮಾಡಿಕೊಳ್ಳುತ್ತಿದ್ದ ಆ ಕುಟುಂಬ ಅಧಿಕಾರ ವಂಚಿತ ಆಗಿರುವುದರಿಂದ ಈಗ ಹತಾಶೆಯಲ್ಲಿದೆ. ದೇಶದ ಹಿಂದಿನ ಎಲ್ಲಾ ರಕ್ಷಣಾ ವ್ಯವಹಾರಗಳಲ್ಲಿಯೂ ಡೀಲ್ ಮಾಡಿಕೊಳ್ಳುತ್ತಿದ್ದ ಇವರು ಅಧಿಕಾರಕ್ಕಾಗಿ ಚಡಪಡಿಸುತ್ತಿದ್ದಾರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಡೀಲ್‌ನಲ್ಲಿ ಈ ಕುಟುಂಬ ಪಾಲುದಾರರಾಗಿದ್ದರು ಎಂದು ಈಗ ಬಂಧನದಲ್ಲಿರುವ ವ್ಯವಹಾರದ ಮಧ್ಯವರ್ತಿ ಕ್ರಿಶ್ಚಿಯನ್ ಮೈಖೆಲ್ ಹೇಳಿಕೆ ನೀಡಿದ್ದಾನೆ.

ಇಂತಹ ಕುಟುಂಬದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಕುಟುಂಬವೇ ಈಗ ರಫೇಲ್ ಡೀಲ್‌ನಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದ ಅವರು, ಅಭದ್ರತೆಯಿಂದ ಸೋಲಿನ ಭೀತಿಯಿಂದ ಉತ್ತರ ಪ್ರದೇಶದ ಅಮೇಠಿಯಿಂದ ಕೇರಳದ ವಾಯನಾಡಿಗೆ ಓಡಿ ಹೋಗಿ ಈ ಕುಟುಂಬ ಚುನಾವಣೆಗೆ ಸ್ಪರ್ಧಿಸುವಂತಾಗಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸಂಸದ ಅನಂತಕುಮಾರ್ ಹೆಗಡೆ, ಶಾಸಕಿ ರೂಪಾಲಿ ನಾಯ್ಕ ಹಾಗೂ ಇನ್ನಿತರರು ಇದ್ದರು.