ದೋಣಿ ಮುಳುಗಿ ಹತ್ತಕ್ಕೂ ಹೆಚ್ಚು ಸಾವು

ದೋಣಿ ಮುಳುಗಿ ಹತ್ತಕ್ಕೂ ಹೆಚ್ಚು ಸಾವು

SB   ¦    Jan 21, 2019 09:37:15 PM (IST)
ದೋಣಿ ಮುಳುಗಿ ಹತ್ತಕ್ಕೂ ಹೆಚ್ಚು ಸಾವು

ಕಾರವಾರ: ಇಲ್ಲಿನ ಅರಬ್ಬಿ ಸಮುದ್ರದ ಕೂರ್ಮಗಡ ನಡುಗಡೆಯ ಜಾತ್ರೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಪಾತಿ ದೋಣಿ ಅಲೆಯ ರಭಸಕ್ಕೆ ಪಲ್ಟಿಯಾದ ಪರಿಣಾಮ ಹತ್ತಕ್ಕೂ ಹೆಚ್ಚು ಜನರು ಜಲಸಮಾಧಿಯಾದ ಘಟನೆ ಕಾರವಾರದಲ್ಲಿ ಸೋಮವಾರ ಸಂಭವಿಸಿದೆ.

ಬೋಟಿನಲ್ಲಿ ಸುಮಾರು 25ಕ್ಕೂ ಹೆಚ್ಚು ಜನರಿದ್ದರೂ ಎನ್ನಲಾಗಿದ್ದು ನಾಪತ್ತೆಯಾದವರು ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ 8 ಜನರ ಮೃತದೇಹ ಪತ್ತೆಯಾಗಿದ್ದು ಎಂಟು ಜನರನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಐವರು ಮಹಿಳೆಯರು, ಮೂವರು ಪುರುಷರು ಹಾಗೂ ಒಂದು ಹಸುಸೂಗು ಸೇರಿದೆ.

ಮೃತರನ್ನು ನೀಲೇಶ್ ರೋಹಿದಾಸ ಪೆಡ್ನೇಕರ್, ಕುಮಾರ ಎಂ, ಗಣಪತಿ ಕೋಠಾರಕರ್, ಜಯಶ್ರಿ ಕೋಠಾರಕರ್, ಅನ್ನಕ್ಕ ಇಂಗಳಕರ್ ಎಂದು ಗುರುತಿಸಲಾಗಿದೆ. ಶ್ರೇಯಾ ಪಾವಸ್ಕರ್ ಎಂಬಾತರು ಕಣ್ಮರೆಯಾಗಿದ್ದಾರೆ. ಮಗು ಹಾಗೂ ಇನ್ನುಳಿದ ಇಬ್ಬರು ಮೃತರ ಗುರುತು ಪತ್ತೆಯಾಗಿಲ್ಲ. ನವೀನ ಪಾಲಂಕರ್, ನೇಹಾ ನಿಲೇಶ್ ಪೆಡ್ನೇಕರ್, ರಾಧಾ ಕೃಷ್ಣ ಹುಲಸ್ವಾರ, ವೈಭವ ವಿನೋದ ರಾಯ್ಕರ್, ಮಹೇಶ್ ಪಿ ಶೇಟ್, ಆದರ್ಶ ಶಿರೋಡಕರ್, ದರ್ಶನ ಶಿರೋಡಕರ್ ಗಂಭೀರ ಸ್ಥಿತಿಯಲ್ಲಿದ್ದಾರೆ. ಸುರೇಶ್ ನಾಯ್ಕ, ಅಮುಲ್ ನೇಲಕರ್, ಶ್ರೀನಿವಾಸ ಬಾಂದೆಕರ್, ಗಣೇಶ್ ಪರಶುರಾಮ್ ಎಂಬಾತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಂಡಿದ್ದಾರೆ.

ಬೆಳಗ್ಗೆಯೇ ಪರ್ಷಿನ್ ಬೋಟ್ಗಳ ಮೂಲಕ ನಗರದ ಬೈತಖೋಲ ಮಾರ್ಗವಾಗಿ ಕುರ್ಮಗಡ ನಡುಗಡೆಗೆ ತೆರಳಿದ್ದ ಜನರು ದೇವರಿಗೆ ಪೂಜೆ ಸಲ್ಲಿಸಿ ಪಾತಿ ದೋಣಿಯ ಮೇಲೆ ಬರುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಫೈಬರ್ನ ಪಾತಿದೋಣಿಯಲ್ಲಿ 10ಕ್ಕೂ ಹೆಚ್ಚು ಜನರನ್ನು ತರುವ ಅವಕಾಶವಿಲ್ಲ. ಆದರೆ ಬೋಟ್ ಚಾಲಕ 25ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಕೋಡಿಭಾಗ ಮಾರ್ಗವಾಗಿ ಹೊರಟಿದ್ದ. ಅದೇ ಸಂದರ್ಭದಲ್ಲಿ ಸಮುದ್ರದಲ್ಲಿ ರಭಸವಾಗಿ ಎದ್ದ ಅಲೆ ದೋಣಿಯನ್ನು ಆಳೆತ್ತರಕ್ಕೆ ಒಯ್ದಿದೆ. ಇನ್ನೊಮ್ಮೆ ಬಂದ ರಭಸದ ಅಲೆಯಿಂದಾಗಿ ಬೋಟಿ ಪಲ್ಪಿಯಾಗಿದೆ.

ಬೋಟ್‍ನಲ್ಲಿ 25ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ಅಧಿಕ ಜನರನ್ನು ಸಾಗಿಸುತ್ತಿದ್ದ ಕಾರಣದಿಂದ ಬೋಟ್ ದುರಂತ ಸಂಭವಿಸಿದ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. ದುರಂತಕ್ಕಿಡಾದ ಬೋಟ್ ಪಕ್ಕದಲ್ಲಿನ ಬೋಟ್‍ನಲ್ಲಿ ಶಾಸಕಿ ರೂಪಾಲಿ ನಾಯ್ಕ ಸಂಚರಿಸುತ್ತಿದ್ದರು. ತಮ್ಮ ಕಣ್ಮುಂದೆಯೇ ಬೋಟ್ ಪಲ್ಟಿಯಾಗಿ ಜನ ಸಾವನಪ್ಪಿದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ಬೋಟ್ ದುರಂತದ ತಿಳಿದ ತಕ್ಷಣ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ರೋಷನ್ ಇತರರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಬ್ಬಳ್ಳಿಯಲ್ಲಿದ್ದ ಸಚಿವ ಆರ್.ವಿ ದೇಶಪಾಂಡೆ ನೇರವಾಗಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ದಿಗ್ಬ್ರಮೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಚಿವ ಆರ್.ವಿ ದೇಶಪಾಂಡೆ, ಈ ಘಟನೆ ದುರದೃಷ್ಟಕರವಾಗಿದ್ದು ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದಿಂದ ನೆರವು ನೀಡಲಾಗುವದು ಎಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಅಗತ್ಯ ನೆರವು ನೀಡುವದಾಗಿ ಘೋಷಿಸಿದರು. ನಾಪತ್ತೆಯಾದವರ ಪತ್ತೆಗೆ ಕೋಸ್ಟಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ಹುಡುಕಾಟ ಮುಂದುವರಿದಿದೆ. ರಕ್ಷಣೆಗೊಳಗಾದವರನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಸಲಾಗಿದ್ದು ಮೃತರ ಶವವನ್ನು ಶವಾಗಾರದಲ್ಲಿಡಲಾಗಿದೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More Images