ಈಡೇರದ ಆದಿವಾಸಿಗಳ ಸಮಸ್ಯೆ: ಪ್ರತಿಭಟನೆಗೆ ನಿರ್ಧಾರ

  ಈಡೇರದ ಆದಿವಾಸಿಗಳ ಸಮಸ್ಯೆ: ಪ್ರತಿಭಟನೆಗೆ ನಿರ್ಧಾರ

LK   ¦    Sep 11, 2019 01:54:05 PM (IST)
   ಈಡೇರದ ಆದಿವಾಸಿಗಳ ಸಮಸ್ಯೆ: ಪ್ರತಿಭಟನೆಗೆ ನಿರ್ಧಾರ

ಎಚ್.ಡಿ.ಕೋಟೆ:ಸಮಾಜ ಕಲ್ಯಾಣ ಇಲಾಖೆ ರಾಜ್ಯ ಕಾರ್ಯದರ್ಶಿ ಮಟ್ಟದಲ್ಲಿ ವಿಧಾನಸೌಧಲ್ಲಿ ಅಧಿಕಾರಿಗಳು ಮತ್ತು ಆದಿವಾಸಿಗಳ ನಡುವೆ ನಡೆದ ಸಭೆಯಲ್ಲಿ ಕೊಟ್ಟ ಭರವಸೆಗಳು ಇನ್ನೂ ಈಡೇರಿಲ್ಲ. ಹೀಗಾಗಿ ಮೂರನೇ ಬಾರಿಗೆ ತಾಲೂಕಿನ ಬೀಮನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೆ. 16 ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಆದಿವಾಸಿ ಗಿರಿಜನ ಮುಖಂಡ ಶೈಲೇಂದ್ರಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟ ಮತ್ತು ರಾಜ್ಯ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್ 26 ರಿಂದ ಜನವರಿ 5, 2019 ರವರೆಗೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ 11 ದಿನಗಳ ಕಾಲ ಪ್ರತಿಭಟನೆ ನಡೆಸಲಾಯಿತು. ಅಲ್ಲಿಯೂ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಕೆಲವು ಭರವಸೆ ಕೊಟ್ಟರು. ಆದರೆ ಈಡೇರಲಿಲ್ಲ. ಈ ವರ್ಷ ಫೆಬ್ರವರಿ ತಿಂಗಳಂದು ಎಚ್.ಡಿ. ಕೋಟೆ ಪಟ್ಟಣದ ಮಿನಿ ವಿಧಾನಸೌದದ ಮುಂದೆ ಸುಮಾರು 9 ದಿನಗಳ ಕಾಲ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಕಾರ್ಯದರ್ಶಿ ಜಿ.ಕುಮಾರನಾಯಕ್ ಮತ್ತು ಜಿಲ್ಲಾಧಿಕಾರಿಗಳು ಬಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಸಲಾಗುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.

ಅದರಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮತ್ತು ಇತರ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಆದರೆ ಈವರೆಗೂ ಏನೂ ಪ್ರಯೋಜನವಾಗಿಲ್ಲ. ಅರಣ್ಯ ಹಕ್ಕು ಕಾಯ್ದೆ 2006 ನಿಯಮ, 2008 ರ ತಿದ್ದುಪಡಿ, 2012 ರ ಪ್ರಕಾರ ಯಾವೊಂದು ಸವಲತ್ತುಗಳು ಅನುಷ್ಠಾನ ಆಗಿಲ್ಲ. ಎಚ್.ಡಿ.ಕೋಟೆ ತಾಲೂಕಿನಲ್ಲಿ 110 ಹಾಡಿಗಳು, ಹುಣಸೂರಿನಲ್ಲಿ 30 ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ 38 ಹಾಡಿಗಳಿದ್ದು, ಇಲ್ಲಿಂದ ಹೊರ ಬಂದ ಆದಿವಾಸಿ ಗಿರಿಜನರಿಗೆ ಈವರೆಗೂ ಸಮರ್ಪಕ ಪುನರ್ವಸತಿ ಕಲ್ಪಿಸಿಲ್ಲ. ಇದರ ಜತೆಗೆ 2014 ಜುಲೈ ತಿಂಗಳಲ್ಲಿ ರಾಜ್ಯದ ಉಚ್ಚ ನ್ಯಾಯಾಲಯ ಮೂರು ತಾಲೂಕುಗಳ 3145 ಆದಿವಾಸಿ ಗಿರಿಜನ ಕುಟುಂಬಗಳಿಗೆ 90 ದಿನಗಳಲ್ಲಿ ಪುನರ್ವಸತಿ ಕಲ್ಪಿಸಬೇಕೆಂದು ಆದೇಶ ಕೊಟ್ಟಿದ್ದರೂ, ಸರಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ. ಇದರ ಬಗ್ಗೆ ಕೇಳುವವರು ಯಾರೂ ಇಲ್ಲದಾಗಿದೆ.

ಹಾಗಾಗಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನ ಆಗಬೇಕು. ಹಕ್ಕು ಪತ್ರ ಕೊಡಬೇಕು, ಗುಳೆ ಹೋಗುವ ಆದಿವಾಸಿ ಗಿರಿಜನರಲ್ಲಿ ಮೊದಲ ಹಂತದಲ್ಲಿ ಕೊನೆ ಪಕ್ಷ 100 ಜನರಿಗಾದರೂ ಮೀನುಗಾರಿಕೆ ತರಬೇತಿ ಕೊಡಬೇಕು. ಅವರಿಗೆ ಸಲಕರಣೆಗಳನ್ನು ಒದಗಿಸಬೇಕು, ಆದಿವಾಸಿ ಗಿರಿಜನರ ಅರೋಗ್ಯಕ್ಕೆ ಸರಕಾರ 15 ಲಕ್ಷ ಹಣ ಮೀಸಲಿಡಬೇಕು,

ಗಿರಿಜನ ಆಶ್ರವi ಶಾಲೆಗಳನ್ನು ಕೇರಳ ಮಾದರಿಯಲ್ಲಿ ಪ್ರಾರಂಭಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಪ್ರಾರಂಭಿಸುತ್ತಿದ್ದೇವೆ. ಈ ಬಾರಿ ಸಮಸ್ಯೆ ಪರಿಹಾರ ಆಗುವ ತನಕ ಜಾಗ ಬಿಟ್ಟು ಎದ್ದು ಹೋಗುವುದಿಲ್ಲ ಎಂದು ತಿಳಿಸಿದರು.

ಮುಖಂಡರಾದ ಚಂದ್ರು, ಜಾನಕಮ್ಮ, ಬಾಬು, ಪರಮೇಶ್, ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.