ಮುಖ್ಯಮಂತ್ರಿ ವಿರುದ್ಧ ಬಿಜೆಪಿ, ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಖ್ಯಮಂತ್ರಿ ವಿರುದ್ಧ ಬಿಜೆಪಿ, ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

CI   ¦    Jan 12, 2018 06:07:13 PM (IST)
ಮುಖ್ಯಮಂತ್ರಿ ವಿರುದ್ಧ ಬಿಜೆಪಿ, ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮಡಿಕೇರಿ: ಬಿಜೆಪಿ, ಆರ್ ಎಸ್ಎಸ್ ಮತ್ತು ಬಜರಂಗ ದಳದವರನ್ನು ಉಗ್ರವಾದಿಗಳೆಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈ ಹೇಳಿಕೆಯನ್ನು ಸಮರ್ಥಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪ್ರತಿಕೃತಿಗಳನ್ನು ದಹಿಸಿ ಜಿಲ್ಲಾ ಬಿಜೆಪಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿತು.

ರಾಜ್ಯದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಹತ್ಯೆಯ ಹಿಂದಿರುವ ಸಂಘಟನೆಗಳನ್ನು ನಿಷೇಧಿಸಲು ಮುಂದಾಗದ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ದೇಶಭಕ್ತ ಸಂಘಟನೆಗಳನ್ನು ಉಗ್ರವಾದಿಗಳೆಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದಟತನ ತೋರುತ್ತಿದ್ದಾರೆಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಸೇರಿದಂತೆ ಎಲ್ಲಾ ಗೌರವಾನ್ವಿತರು ಆರ್ ಎಸ್ಎಸ್ ಹಿನ್ನೆಲೆಯಿಂದಲೇ ಬಂದಿದ್ದಾರೆ. ಆರ್ ಎಸ್ಎಸ್ ವಿಶ್ವದಲ್ಲಿಯೇ ಬೃಹತ್ ಸಂಘಟನೆ ಎಂದು ಗುರುತಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಘಟನೆಯನ್ನು ಉಗ್ರವಾದಿಗಳಿಗೆ ಹೋಲಿಸಿರುವುದು ತೀರಾ ಖಂಡನೀಯ. ತಮ್ಮ ಹೇಳಿಕೆಯನ್ನು ತಿದ್ದಿಕೊಳ್ಳುವ ಬದಲು ಅದನ್ನು ಸಮರ್ಥಿಸಿಕೊಂಡಿರುವುದು ಅವರ ಮೂರ್ಖತನವನ್ನು ತೋರುತ್ತದೆ. ಈ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಕೂಡಾ ಸಮರ್ಥಿಸಿಕೊಂಡಿರುವುದು ಖಂಡನೀಯ. ಮುಂಬರುವ ಚುನಾವಣೆಯಲ್ಲಿ ಜನತೆ ಈ ಹೇಳಿಕೆಗೆ ತಕ್ಕ ಉತ್ತರ ನೀಡುತ್ತಾರೆಂದು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಪ್ರಮುಖರಾದ ಬೆಲ್ಲು ಸೋಮಯ್ಯ, ಎಂ.ಬಿ.ದೇವಯ್ಯ, ರವಿಬಸಪ್ಪ, ಬಾಲಚಂದ್ರ ಕಳಗಿ, ಸುವಿನ್ ಗಣಪತಿ, ಶಜಿಲ್ ಕೃಷ್ಣ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್, ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರು, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚೆಂಗಪ್ಪ, ಪದಾಧಿಕಾರಿಗಳು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.