ಶ್ರದ್ಧಾಭಕ್ತಿಯಿಂದ ಜರುಗಿದ ಶಿವರಾತ್ರಿ ಮಹೋತ್ಸವ

ಶ್ರದ್ಧಾಭಕ್ತಿಯಿಂದ ಜರುಗಿದ ಶಿವರಾತ್ರಿ ಮಹೋತ್ಸವ

CI   ¦    Feb 13, 2018 07:12:40 PM (IST)
ಶ್ರದ್ಧಾಭಕ್ತಿಯಿಂದ ಜರುಗಿದ ಶಿವರಾತ್ರಿ ಮಹೋತ್ಸವ

ಮಡಿಕೇರಿ: ಜಿಲ್ಲೆಯಾದ್ಯಂತ ಶಿವರಾತ್ರಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ನಗರದ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಬಿಲ್ವಪತ್ರೆ ಅರ್ಚನೆ, ಭಸ್ಮಾರ್ಚನೆ, ಭಜನೆ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಎನ್.ಆರ್. ಸಮೂಹದ ಸೈಕಲ್ ಪ್ಯೂರ್ ಅಗರಬತ್ತೀಸ್, ಕರ್ನಾಟಕದ 108 ದೇವಾಲಯಗಳಲ್ಲಿ ಅಖಂಡ ಜ್ಯೋತಿ ಅಗರಬತ್ತಿಯನ್ನು ಬೆಳಗಿಸುತ್ತಿದ್ದು, ನಗರದ ಶ್ರೀಓಂಕಾರೇಶ್ವರ ದೇವಾಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ದೊಡ್ಡ ಗಾತ್ರದ ಅಗರಬತ್ತಿ ಬೆಳಗಿಸಿದರು.

ಮೃತ್ಯುಂಜಯ ಹೋಮ: ಶ್ರೀವೀರಭದ್ರ ಮುನೇಶ್ವರ ದೇವಾಲಯ ಸಮಿತಿ ಮತ್ತು ಮಡಿವಾಳರ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ನಗರದ ಶ್ರೀವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಪ್ರಯುಕ್ತ ಮಹಾ ಮೃತ್ಯುಂಜಯ ಹೋಮ ನಡೆಯಿತು.

ಮಹಾಗಣಪತಿ ಹೋಮ, ಶ್ರೀ ವೀರಭದ್ರ ಉತ್ಸವ ಮೂರ್ತಿಯ ಶೋಭಾಯಾತ್ರೆ, ಮಹಾ ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ, ಸಂಜೆ ಸಾಮೂಹಿಕ ಪ್ರಾರ್ಥನೆ, ಸಂಕಲ್ಪ ಸೇರಿದಂತೆ ಗೋ ಪೂಜೆ, ಮಹಾ ಮೃತ್ಯುಂಜಯ ಹೋಮ, ಏಕಾದಶ ರುದ್ರಾಭಿಷೇಕ ಜರುಗಿತು. ರಾತ್ರಿ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕರ್ಣಂಗೇರಿಯ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಕೂಡ ಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾಶಿ ಶಿವಲಿಂಗಕ್ಕೆ ಅಭಿಷೇಕ ನಡೆಯಿತು.

ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಭಕ್ತರಿಗಾಗಿ ಶಿವಲಿಂಗ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು.

More Images