ಕೈ ಕಾರ್ಯಕರ್ತರ ಸೆಳೆಯಲು ಕಮಲ ತಂತ್ರ...

ಕೈ ಕಾರ್ಯಕರ್ತರ ಸೆಳೆಯಲು ಕಮಲ ತಂತ್ರ...

LK   ¦    Jan 11, 2017 05:52:01 PM (IST)

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರಭಾವಿ ನಾಯಕನಾಗಿ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನದ ಬಳಿಕ ಕಾಂಗ್ರೆಸ್ ನ ಕಾರ್ಯಕರ್ತರು ಮಂಕಾಗಿದ್ದಾರೆ. ಇದನ್ನೇ ಬಳಸಿಕೊಂಡ ಬಿಜೆಪಿ ತನ್ನ ಅಡಿಪಾಯವನ್ನು ಗಟ್ಟಿ ಮಾಡಿಕೊಳ್ಳಲು ರಾಜಕೀಯ ತಂತ್ರವನ್ನು ಬಳಸುತ್ತಿದ್ದು ಇದರ ಪರಿಣಾಮವಾಗಿ ಎಪಿಎಂಸಿ ಚುನಾವಣೆಗೆ ಮುನ್ನವೇ ನೂರಾರು ಕಾರ್ಯಕರ್ತರು ಬಿಜೆಪಿಯತ್ತ ಗುಳೆ ಹೋಗುತ್ತಿರುವುದು ಕಂಡು ಬಂದಿದೆ.

ಸಚಿವರ ನಿಧನದ ಬಳಿಕ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ಕುಗ್ಗಿದೆ. ನಾಯಕನಿಲ್ಲದ ಕಾರಣದಿಂದ ಕಾರ್ಯಕರ್ತರಿಗೆ ಹುರುಪು ತುಂಬುವವರ ಕೊರತೆ ಕಂಡು ಬಂದಿದ್ದು, ಸದ್ಯದ ಸ್ಥಿತಿಯಲ್ಲಿ ಸೂತ್ರವಿಲ್ಲದ ಪಟದಂತಾಗಿದೆ. ಈಗಾಗಲೇ ಮಹದೇವಪ್ರಸಾದ್ ಅವರ ಪತ್ನಿ ಗೀತಾಮಹದೇವಪ್ರಸಾದ್ ಅವರು ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದಾರೆ. ಆದರೆ ಪತಿಯ ಕ್ರಿಯಾವಿಧಿಗಳನ್ನು ಕಳೆದುಕೊಂಡು ಮಾನಸಿಕ ಸಿದ್ಧತೆ ಮಾಡಿಕೊಂಡು ಅವರು ಅಖಾಡಕ್ಕಿಳಿಯಲು ಇನ್ನೊಂದಷ್ಟು ದಿನಗಳು ಬೇಕಾಗುತ್ತದೆ. ಅಷ್ಟರಲ್ಲಿ ಇನ್ನೇನು ಬೆಳವಣಿಗೆಯಾಗುತ್ತದೆಯೋ ಗೊತ್ತಿಲ್ಲ.

ಇದೀಗ ಗುಂಡ್ಲುಪೇಟೆ ತಾಲೂಕೊಂದರಲ್ಲೇ ನೂರಾರು ಸಣ್ಣಪುಟ್ಟ ಮುಖಂಡರು, ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡಿ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಎಂದರೂ ತಪ್ಪಾಗಲಾರದು.

ಸೂತಕದ ಛಾಯೆಯಲ್ಲಿದ್ದ ಕಾಂಗ್ರೆಸ್ ಎಪಿಎಂಸಿ ಚುನಾವಣೆಯಲ್ಲೂ ಹೆಚ್ಚಿನ ಪ್ರಚಾರ ನಡೆಸಿಲ್ಲ. ಅದನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಂಡಿದೆ. ಆ ಮೂಲಕ ಮುಂದಿನ ಮಹದೇವಪ್ರಸಾದ್ ಅವರ ನಿಧನದಿಂದ ತೆರವಾದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಕಬಳಿಸುವ ತಂತ್ರವೂ ಬಿಜೆಪಿಯದ್ದಾಗಿದೆ.

ಹಳೇ ಮೈಸೂರು ವ್ಯಾಪ್ತಿಯ ಮಂಡ್ಯದಲ್ಲಿ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಸಾಧಿಸಿದೆ. ಅಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿದೆ. ಹೀಗಿರುವಾಗ ಚಾಮರಾಜನಗರದಲ್ಲಿ ಕಾಂಗ್ರೆಸ್ ನ್ನು ಮೂಲೆಗುಂಪು ಮಾಡಿ ಬಿಜೆಪಿ ಅಧಿಪತ್ಯ ಸಾಧಿಸಲು ಮುಂದಾಗಿದ್ದು, ಅದರ ಆರಂಭದ ತಂತ್ರವಾಗಿ ಕಾರ್ಯಕರ್ತರನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತಿದೆ.

ಈ ಹಿಂದೆ ಮಹದೇವಪ್ರಸಾದ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಕೆಲವು ಗ್ರಾಮಮಟ್ಟದ ಬಿಜೆಪಿ ಮುಖಂಡರು ಇದೀಗ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಅವರೊಂದಿಗೆ ಮತ್ತಷ್ಟು ಕಾಂಗ್ರೆಸ್ ನ ಕಾರ್ಯಕರ್ತರೆನ್ನಲಾದವರು ಸೇರ್ಪಡೆಗೊಳ್ಳುತ್ತಿದ್ದಾರೆ.

ಹೆಚ್ಚಿನವರು ಶ್ರೀನಿವಾಸಪ್ರಸಾದ್ ಅಭಿಮಾನಿಗಳಾಗಿದ್ದು, ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ ಬಿಜೆಪಿಯತ್ತ ಒಲವು ತೋರಿದ್ದಾರೆ. ಕೊಡಸೋಗೆ ಗ್ರಾಮದ ದಲಿತ ಮುಖಂಡರಾದ ವಿಜಯಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿಯ ಕದ ತಟ್ಟಿಯಾಗಿದೆ. ಇದು ಮುಂದೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಇದೀಗ ನಡೆಯುತ್ತಿರುವ ಎಪಿಎಂಸಿ ಚುನಾವಣೆ ಬಳಿಕ ಗೊತ್ತಾಗಲಿದೆ.