ನಿಖಿಲ್ ನಾಮಪತ್ರ ಅಸಿಂಧುಗೊಳ್ಳುವುದು ಖಚಿತ: ಟಿ.ಜೆ. ಅಬ್ರಹಾಂ

ನಿಖಿಲ್ ನಾಮಪತ್ರ ಅಸಿಂಧುಗೊಳ್ಳುವುದು ಖಚಿತ: ಟಿ.ಜೆ. ಅಬ್ರಹಾಂ

LK   ¦    Apr 15, 2019 07:16:35 PM (IST)
ನಿಖಿಲ್ ನಾಮಪತ್ರ ಅಸಿಂಧುಗೊಳ್ಳುವುದು ಖಚಿತ: ಟಿ.ಜೆ. ಅಬ್ರಹಾಂ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಅಸಿಂಧುಗೊಳ್ಳುವುದು ಖಚಿತ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಖಚಿತವಾಗಿ ಹೇಳಿದರು.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಿಂಧುಗೊಳಿಸಿರುವುದೇ ಕಾನೂನುಬಾಹಿರ. ನಾಮಪತ್ರದಲ್ಲಿನ ನೂನ್ಯತೆಯನ್ನು ಕಂಡುಹಿಡಿಯಲು ತಜ್ಞರೇನು ಬೇಕಿಲ್ಲ. ಸಾಮಾನ್ಯ ವ್ಯಕ್ತಿಗೂ ಅದರ ಅರಿವಾಗುತ್ತದೆ. ಈ ಸಾಮಾನ್ಯ ಜ್ಞಾನ ಐಎಎಸ್ ಅಧಿಕಾರಿಗೆ ಅರ್ಥವಾಗದಿರುವುದು ಬೇಸರದ ಸಂಗತಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿಖಿಲ್ ನಾಮಪತ್ರ ಸಲ್ಲಿಸಿರುವುದು ಮಾ.25ರಂದು. ನಾಮಪತ್ರದಲ್ಲಿನ ನೂನ್ಯತೆಗಳನ್ನು ಸರಿಪಡಿಸಲು ಚುನಾವಣಾಧಿಕಾರಿ ಕಾಲಾವಕಾಶ ನೀಡಿ ಅಫಿಡೆವಿಟ್‍ನ್ನು ಸರಿಪಡಿಸಿಕೊಂಡು ಬರುವಂತೆ ತಿಳಿಸಿದ್ದಾರೆ. ಆದರೆ, ಮಾ.27ರಂದು ಸಲ್ಲಿಸಿರುವ ಹೊಸ ಅಫಿಡೆವಿಟ್‍ನಲ್ಲಿ ದಿನಾಂಕ ಮಾತ್ರ ಮಾ.21 ಎಂದು ನಮೂದಿಸಲಾಗಿದೆ. ತಿದ್ದುಪಡಿಯಾಗಿರುವ ಅಫಿಡೆವಿಟ್‍ಗಳು ಬಣ್ಣದಲ್ಲಿರುವುದು ದೋಷವನ್ನು ಎತ್ತಿ ತೋರಿಸುತ್ತವೆ ಎಂದು ತಿಳಿಸಿದರು.

ನಿಖಿಲ್ ನಾಮಪತ್ರದಲ್ಲಿರುವ ದೋಷಗಳ ವಿರುದ್ಧ ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ. ಅದು ಅಸಿಂಧು ಎಂದು ಸಾಬೀತಾಗುವುದು ಖಚಿತ. ಹಾಗಾಗಿ ಮತದಾರರು ನಿಖಿಲ್‍ಗೆ ಓಟು ಹಾಕಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ನಿಖಿಲ್ ಗೆಲ್ಲಿಸಿಕೊಳ್ಳುವುದಕ್ಕೆ 150 ಕೋಟಿ ರೂ. ಹಣ ಖರ್ಚು ಮಾಡುವುದಕ್ಕೆ ದೇವೇಗೌಡರ ಕುಟುಂಬದವರು ರೆಡಿಯಾಗಿದ್ದಾರೆ. ಪ್ರತಿ ಬೂತ್‍ಗೆ 5 ಲಕ್ಷ ಕೊಡುವುದಾಗಿ ಹೇಳಿರುವ ಆಡಿಯೋ ಕೂಡ ಬಹಿರಂಗಗೊಂಡಿದೆ ಎಂದು ಹೇಳಿದರು.