ಅಕ್ರಮ ಗೋಸಾಗಾಟ, ಹಲ್ಲೆ ಆರೋಪ : ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಅಕ್ರಮ ಗೋಸಾಗಾಟ, ಹಲ್ಲೆ ಆರೋಪ : ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

CI   ¦    Sep 14, 2018 05:31:51 PM (IST)
ಅಕ್ರಮ ಗೋಸಾಗಾಟ, ಹಲ್ಲೆ ಆರೋಪ : ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಮಡಿಕೇರಿ: ಅಕ್ರಮ ಗೋಸಾಗಾಟದ ಮೂಲಕ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ಹಿತರಕ್ಷಣಾ ಸಮಿತಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಕುಕ್ಕೇರ ಅಜಿತ್, ಬಜರಂಗದಳದ ಜಿಲ್ಲಾ ಸಂಚಾಲಕ ಚೇತನ್ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಘೋಷಣೆಗಳ ಸಹಿತ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತೆರಳಿ ಕೋಮು ದ್ವೇಷ ಸಾಧಿಸುತ್ತಿರುವವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಸೆ.13 ರಂದು ಮಡಿಕೇರಿ ಸಮೀಪದ ಅಪ್ಪಂಗಳದಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಪಿಕ್‍ಅಪ್ ವಾಹನದಲ್ಲಿ ಗೋಸಾಗಾಟ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಗಣೇಶೋತ್ಸವ ಸಮಿತಿಯವರ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿ, ಅಪಘಾತಕ್ಕೂ ಆತ ಕಾರಣನಾಗಿದ್ದಾನೆ. ಅಲ್ಲದೆ ಕೆಲವು ದುಷ್ಕರ್ಮಿಗಳನ್ನು ಕರೆಯಿಸಿಕೊಂಡು ಸಮಿತಿಯ ಯುವಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ವ್ಯಾಪಕವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ನಿಗಾ ವಹಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.

ಹಿಂದೂ ಜಾಗರಣಾ ವೇದಿಕೆಯ ವಿಭಾಗೀಯ ಸಂಚಾಲಕ ಜೀವನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಬಜರಂಗದಳದ ಸಂಚಾಲಕ ಮನು, ನಗರಾಧ್ಯಕ್ಷ ನಂದೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.