ಹೇಮಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ಥರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಕ್ಕೆ ಮನವಿ

ಹೇಮಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ಥರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಕ್ಕೆ ಮನವಿ

CI   ¦    Oct 12, 2017 07:09:19 PM (IST)
ಹೇಮಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ಥರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಕ್ಕೆ ಮನವಿ

ಸೋಮವಾರಪೇಟೆ: ಹೇಮಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ಥರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡದಿದ್ದರೆ ವಿಧಾನಸೌಧ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕೊಡ್ಲಿಪೇಟೆ ಸಮೀಪದ ಜನಾರ್ದನಹಳ್ಳಿ, ಮಾವಿನಹಳ್ಳಿ, ಮತ್ತು ಮಾಗಡಿಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹಿನ್ನೀರಿನ ಮುಳುಗಡೆಯಿಂದ ಆಸ್ತಿಪಾಸ್ತಿ ಕಳೆದುಕೊಂಡು ಪ್ರಾಣಿಗಳಂತೆ ಬದುಕುತ್ತಿದ್ದೇವೆ. ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಕಳೆದ 27 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಸಮಸ್ಯೆ ಬಗೆಹರಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ಬೆಸೂರು ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷ ಜೆ.ಆರ್.ಹೊನ್ನಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತಾಲೂಕಿನ ಗಡಿಭಾಗ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮೂರು ಗ್ರಾಮಗಳು ಮುಳುಗಡೆ ಪ್ರದೇಶವಾಗಿದ್ದು, ಈ ಗ್ರಾಮವನ್ನು ಸ್ಥಳಾಂತರಿಸುವಂತೆ 1990ರಿಂದಲೇ ಹೋರಾಟವನ್ನು ನಡೆಸುತ್ತಿದ್ದೇವೆ.

ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರಕಾರದಿಂದ ನೇಮಿಸಲ್ಪಟ್ಟ ಉನ್ನತ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ನೀರುಗುಂದ ಗ್ರಾಮದ ಸರ್ವೇ ನಂಬರ್ 34/1 ರಲ್ಲಿ ಈ ಹಿಂದೆ ಜಾಗ ಗುರುತಿಸಿ ಹಿನ್ನೀರು ಮುಳುಗಡೆ ಸಂತ್ರಸ್ಥರಿಗೆ ಸುಮಾರು ಆರು ಮುಕ್ಕಾಲು ಏಕರೆ ಜಾಗವನ್ನು ನೀಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಶಿಫಾರಸ್ಸು ಮಾಡಿತು. ತದನಂತರ ಸರಕಾರದ 4 ಸಮಿತಿಗಳು ಮುಳುಗಡೆ ಸಂತ್ರಸ್ಥರನ್ನು ಸ್ಥಳಾಂತರಿಸಿ ಸೌಲಭ್ಯ ಕಲ್ಪಿಸುವಂತೆ ಶಿಫಾರಸ್ಸು ಮಾಡಿದ್ದರೂ ಇದುವರೆಗೂ ಇದನ್ನು ಜಾರಿಗೆ ತರುವಲ್ಲಿ ಯಾವುದೇ ಸರಕಾರಗಳು ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದರು. ಕ್ಷೇತ್ರದ ಶಾಸಕರು ಅರ್ಜಿ ಸಮಿತಿ ಸದಸ್ಯರಾಗಿದ್ದೂ, ಈ ಹಿಂದೆ ಸರಕಾರದಲ್ಲಿ ಸಚಿವರಾಗಿದ್ದರೂ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ.